ಚೆನ್ನೈ: ತಮಿಳುನಾಡಿನ ಐಐಟಿ–ಮದ್ರಾಸ್‌ನಿಂದ ಅಭಿವೃದ್ಧಿಪಡಿಸುತ್ತಿರುವ ಹೈಪರ್‌ಲೂಪ್ ಪರೀಕ್ಷಾ ಟ್ರ್ಯಾಕ್‌ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
‘ಭಾರತೀಯ ರೈಲ್ವೆ ಇಲಾಖೆಯ ಮುಂದಾಳತ್ವದಡಿ ಐಐಟಿ–ಮದ್ರಾಸ್‌ನ ಥೈಯೂರ್ ಕ್ಯಾಂಪಸ್‌ನಲ್ಲಿ 410 ಮೀಟರ್ ಉದ್ದದ ಹೈಪರ್‌ಲೂಪ್ ನಿರ್ವಾತ ಕೊಳವೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಏಷ್ಯಾದ ಅತಿದೊಡ್ಡ ಟ್ರ್ಯಾಕ್ ಇದಾಗಿದೆ. ಶೀಘ್ರವೇ, ವಿಶ್ವದ ಅತಿ ಉದ್ದದ ಹೈಪರ್‌ಲೂಪ್ ಟ್ರ್ಯಾಕ್ ಕೂಡ ಆಗಲಿದೆ’ ಎಂದು ಸಚಿವರು ‘ಎಕ್ಸ್’ನಲ್ಲಿ ಭಾನುವಾರ ತಿಳಿಸಿದ್ದಾರೆ.
‘ಸ್ವದೇಶಿ ಉಪಕರಣಗಳನ್ನು ಬಳಸಿ ಈ ಟ್ರ್ಯಾಕ್ ಅಭಿವೃದ್ಧಿಪಡಿಸಲಾಗುತ್ತಿದೆ. ಟ್ರ್ಯಾಕ್‌ನಲ್ಲಿ ಇಲ್ಲಿಯವರೆಗೆ ನಡೆದಿರುವ ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿವೆ. ಶೀಘ್ರವೇ, ಭಾರತದಲ್ಲಿ ಹೈಪರ್‌ಲೂಪ್ ಸಾರಿಗೆ ಅನುಷ್ಠಾನಗೊಳ್ಳುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.
ಹಳಿಯನ್ನು ಆಧಾರವಾಗಿಟ್ಟುಕೊಂಡು ನಿರ್ವಾತ ಕೊಳವೆಗಳಿಂದ ನಿರ್ಮಿಸಿದ ಸಾರಿಗೆ ಮಾರ್ಗಕ್ಕೆ ಹೈಪರ್‌ಲೂಪ್ ಎಂದು ಕರೆಯಲಾಗುತ್ತದೆ. ಈ ಕೊಳವೆ ಮಾರ್ಗದಲ್ಲಿ ಪಾಡ್ಸ್ ರೂಪದಲ್ಲಿರುವ ಕ್ಯಾಬಿನ್‌ಗಳಲ್ಲಿ ಪ್ರಯಾಣಿಕರು ಕುಳಿತು ಗಂಟೆಗೆ 1 ಸಾವಿರ ಕಿ.ಮೀ. ವೇಗದಲ್ಲಿ ಪಯಣಿಸಬಹುದಾಗಿದೆ.
2022ರ ಮೇ ತಿಂಗಳಿನಲ್ಲಿ ಕೇಂದ್ರ ರೈಲ್ವೆ ಸಚಿವಾಲಯವು ಸ್ವದೇಶಿ ಹೈಪರ್‌ಲೂಪ್ ಸಾರಿಗೆ ಸೇವೆ ಅಭಿವೃದ್ಧಿಗೆ ಅನುಮೋದನೆ ನೀಡಿತ್ತು. ಈ ಸಂಬಂಧ ಐಐಟಿ–ಮದ್ರಾಸ್‌ಗೆ ₹8.34 ಕೋಟಿ ಅನುದಾನ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.