ADVERTISEMENT

ಲಾಕ್‌ಡೌನ್‌ | ಕೊರೊನಾಗೆ ಕರಗಿದ ಐಸ್‌ಕ್ರೀಂ ಉದ್ಯಮ

ಶೇ 90ರಷ್ಟು ಮಾರಾಟ ಕುಸಿತ

ವಿಶ್ವನಾಥ ಎಸ್.
Published 29 ಏಪ್ರಿಲ್ 2020, 22:56 IST
Last Updated 29 ಏಪ್ರಿಲ್ 2020, 22:56 IST
   

ಬೆಂಗಳೂರು: ಕೊರೊನಾ ವೈರಾಣು ಪಿಡುಗು ನಿಯಂತ್ರಿಸಲು ದೇಶದಾದ್ಯಂತ ಹೇರಿರುವ ಲಾಕ್‌ಡೌನ್‌ನಿಂದ ಐಸ್‌ಕ್ರೀಂ‌ ಮಾರಾಟದ ಮೇಲೆ ತೀವ್ರ ಹೊಡೆತ ಬಿದ್ದಿದೆ.

ಹಾಂಗ್ಯೊ, ಅಮೂಲ್, ಮದರ್ ಡೇರಿ ಒಳಗೊಂಡು ಎಲ್ಲಾ ಐಸ್‌ಕ್ರೀಂ ತಯಾರಿಕಾ ಕಂಪನಿಗಳು ಮಾರ್ಚ್–ಮೇ ಅವಧಿಯಲ್ಲಿ ಅತಿ ಹೆಚ್ಚಿನ ವಹಿವಾಟು ನಡೆಸುತ್ತವೆ. ವಾರ್ಷಿಕ ವಹಿವಾಟಿನ ಶೇ 40ರಷ್ಟು ಈ ಮೂರು ತಿಂಗಳಿನಲ್ಲಿಯೇ ಗಳಿಸುತ್ತವೆ. ಆದರೆ ಈ ಬಾರಿ ಕೊರೊನಾದಿಂದಾಗಿ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿದ್ದು, ಭಾರಿ ನಷ್ಟ ಅನುಭವಿಸುವಂತಾಗಿದೆ.

‘ಹಾಂಗ್ಯೊ ವಾರ್ಷಿಕವಾಗಿ ₹ 150 ಕೋಟಿ ಮೊತ್ತದ ವಹಿವಾಟು ನಡೆಸುತ್ತಿದ್ದು, ಅದರಲ್ಲಿ ಮಾರ್ಚ್‌ನಿಂದ ಏಪ್ರಿಲ್ ಅವಧಿಯ ವಹಿವಾಟೇ ₹ 70 ಕೋಟಿ ಇರುತ್ತದೆ. ಅಂದರೆ ಒಟ್ಟು ವಹಿವಾಟಿನ ಶೇ 40-42ರಷ್ಟು. ಆದರೆ, ಈ ಬೇಸಿಗೆ ಅವಧಿಯಲ್ಲಿ ವಹಿವಾಟು ನಡೆದೇ ಇಲ್ಲ. ಏಪ್ರಿಲ್‌ನಲ್ಲಿ ₹ 23 ಕೋಟಿ ವಹಿವಾಟಿನ ಗುರಿ ಇಟ್ಟುಕೊಂಡಿದ್ದೆವು. ಆದರೆ ಆಗಿರುವುದು ₹ 2 ಕೋಟಿಗಿಂತಲೂ ಕಡಿಮೆ. ಅಂದರೆ ಶೇ 10ರಷ್ಟು ವಹಿವಾಟು ಮಾತ್ರವೇ’ ಎಂದು ಹಾಂಗ್ಯೊ ಐಸ್‌ಕ್ರೀಮ್ಸ್‌‌ನ ಉಪಾಧ್ಯಕ್ಷ ಎಸ್.ಎಸ್. ಮಂಜುನಾಥ ಮಾಹಿತಿ ನೀಡಿದರು.

ADVERTISEMENT

‘ಬೇಸಿಗೆ ಅವಧಿ ಆರಂಭವಾಗುವ ಮೂರು ತಿಂಗಳು ಮೊದಲೇ ತಯಾರಿಕೆ, ಪ್ಯಾಕಿಂಗ್, ದಾಸ್ತಾನು ಹಾಗೂ ಸಾಗಣೆ ಕಾರ್ಯಗಳು ಚುರುಕು ಪಡೆದುಕೊಳ್ಳುತ್ತವೆ. ಆದರೆ ಈ ಬಾರಿ ಲಾಕ್‌ಡೌನ್‌ನಿಂದ ಸರಕು ಸಾಗಣೆ ವ್ಯವಸ್ಥೆ ಸ್ಥಗಿತಗೊಂಡಿದ್ದು, ತಯಾರಿಸಿ ಇಟ್ಟಿರುವ ಐಸ್‌ಕ್ರೀಮ್ ಕೋಲ್ಡ್ ಸ್ಟೋರೇಜ್‌ನಲ್ಲಿಯೇ ಉಳಿದಿದೆ. ಇಷ್ಟೇ ಅಲ್ಲ ಸ್ಟೋರೇಜ್ ನಿರ್ವಹಣೆ ವೆಚ್ಚ, ಏಸಿ, ವಿದ್ಯುತ್ ಮತ್ತು ಗೋದಾಮು ಬಾಡಿಗೆ ವೆಚ್ಚವೂ ಹೊರೆಯಾಗಿದೆ’ ಎಂದು ಅವರು ಉದ್ಯಮ ಎದುರಿಸುತ್ತಿರುವ ಸಂಕಷ್ಟ ವಿವರಿಸಿದರು.

‘ಐಸ್‌ಕ್ರೀಂನಿಂದ ಕೊರೊನಾ ಹರಡದು’
ಐಸ್‌ಕ್ರೀಂ‌ನಿಂದ ಕೊರೊನಾ ಹರಡುತ್ತದೆ ಎನ್ನುವ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಇದು ಸುಳ್ಳು ಎಂದು ಯುನಿಸೆಫ್‌ ಕೂಡಾ ಪ್ರಕಟಣೆಯಲ್ಲಿ ತಿಳಿಸಿದೆ. ಐಸ್‌ಕ್ರೀಂ‌ಗೂ ಕೊರೊನಾಗೂ ಯಾವುದೇ ಸಂಬಂಧ ಇಲ್ಲ.ಎಂದು ಭಾರತೀಯ ಐಸ್‌ಕ್ರೀಮ್ ತಯಾರಕರ ಸಂಘ (ಐಐಸಿಎಂಎ) ತಿಳಿಸಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪಟ್ಟಿಗೆ ಐಸ್‌ಕ್ರೀಂ ಅನ್ನೂ ಸೇರಿಸಿರುವುದಕ್ಕೆ ಉದ್ಯಮಿಗಳು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.