ADVERTISEMENT

ಪೆಟ್ರೋಲ್‌ಗಿಂತ ಡೀಸೆಲ್ ದುಬಾರಿ: ಇದೇ ಮೊದಲು!

ಪಿಟಿಐ
Published 24 ಜೂನ್ 2020, 9:53 IST
Last Updated 24 ಜೂನ್ 2020, 9:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸತತ 18 ದಿನಗಳಿಂದ ತೈಲೋತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಿದ್ದರಿಂದ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಡೀಸೆಲ್ ಬೆಲೆ ಪೆಟ್ರೋಲ್‌ಗಿಂತ ಹೆಚ್ಚಾಗಿದೆ.

ದೆಹಲಿಯಲ್ಲಿ ಡೀಸೆಲ್ ದರ ಪ್ರತಿ ಲೀಟರ್‌ಗೆ ₹79.88 ಇದ್ದರೆ, ಪೆಟ್ರೋಲ್ ದರ 79.76 ದಾಖಲಾಗಿದೆ. ಸ್ಥಳೀಯ ವ್ಯಾಟ್ ಆಧರಿಸಿ, ಈ ದರವು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಲಿದೆ.

ದೆಹಲಿ ರಾಜ್ಯ ಸರ್ಕಾರವು ಸ್ಥಳೀಯ ತೆರಿಗೆ ಅಥವಾ ವ್ಯಾಟ್ ಅನ್ನು ಕಳೆದ ತಿಂಗಳಷ್ಟೇ ಪರಿಷ್ಕರಿಸಿದ್ದರಿಂದ ರಾಜಧಾನಿಯಲ್ಲಿ ಮಾತ್ರ ಡೀಸೆಲ್ ದರ ಪೆಟ್ರೋಲ್‌ಗಿಂತ ತುಟ್ಟಿಯಾಗಿದೆ.ಡೀಸೆಲ್‌ ಮೇಲಿನ ತೆರಿಗೆಯನ್ನು ಶೇ 16.75ರಿಂದ ಶೇ 30ಕ್ಕೆ ಹಾಗೂ ಪೆಟ್ರೋಲ್ ಮೇಲಿನ ವ್ಯಾಟ್‌ ಅನ್ನು ಶೆ 27ರಿಂದ ಶೇ 30ಕ್ಕೆ ಹೆಚ್ಚಿಸಲಾಗಿತ್ತು.

ADVERTISEMENT

ಬೆಂಗಳೂರಿನಲ್ಲಿ ಪೆಟ್ರೋಲ್ ದರ 82 ರೂಪಾಯಿ 35 ಪೈಸೆ ಇದ್ದರೆ, ಡೀಸೆಲ್ ದರ 75 ರೂಪಾಯಿ 96 ಪೈಸೆ ಇದೆ. ಮುಂಬೈನಲ್ಲಿ ಪೆಟ್ರೋಲ್ ದರ ₹86.54 ಇದ್ದರೆ, ಡೀಸೆಲ್ ದರ ₹78.22 ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ₹83.04ಕ್ಕೆ ಹಾಗೂ ಡೀಸೆಲ್ ₹77.17ಕ್ಕೆ ಲಭ್ಯವಾಗುತ್ತಿದೆ.

ಕಡಿಮೆ ತೆರಿಗೆಯ ಕಾರಣ, ಸಾಮಾನ್ಯವಾಗಿ ಡೀಸೆಲ್ ದರವು ಪೆಟ್ರೋಲ್‌ಗಿಂತ 18–20 ರೂಪಾಯಿ ಕಡಿಮೆ ಇರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತೆರಿಗೆ ದರವನ್ನು ಹೆಚ್ಚಿಸಲಾಗಿದ್ದು, ಎರಡೂ ಉತ್ಪನ್ನಗಳ ದರ ಸನಿಹಕ್ಕೆ ಬರುತ್ತಿದೆ.

ಕಳೆದ 18 ದಿನಗಳಿಂದ ತೈಲೋತ್ಪನ್ನ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ನಿರಂತರವಾಗಿ ಏರಿಸುತ್ತಾ ಬಂದಿವೆ. ಹೀಗಾಗಿ ಡೀಸೆಲ್ 10 ರೂಪಾಯಿ 49 ಪೈಸೆ ಹಾಗೂ ಪೆಟ್ರೋಲ್ 8 ರೂಪಾಯಿ 5 ಪೈಸೆ ತುಟ್ಟಿಯಾಗಿದೆ. 15 ದಿನಗಳ ಅವಧಿಯನ್ನು ಪರಿಗಣಿಸಿದರೆ, ಹಿಂದೆ ಎಂದೂ ಇಷ್ಟೊಂದು ಪ್ರಮಾಣದ ಹೆಚ್ಚಳ ಆಗಿರಲಿಲ್ಲ ಎಂಬುದು ದತ್ತಾಂಶಗಳಿಂದ ತಿಳಿದುಬಂದಿದೆ.

ದೆಹಲಿಯಲ್ಲಿ ಈ ಹಿಂದೆ ಅತಿಹೆಚ್ಚು ದರವನ್ನು ತೈಲೋತ್ಪನ್ನಗಳು ದಾಖಲಿಸಿದ್ದವು. 2018ರ ಡಿಸೆಂಬರ್ 16ರಂದು ಡೀಸೆಲ್ ದರ ₹75.69 ಹಾಗೂ ಪೆಟ್ರೋಲ್ ಅಕ್ಟೋಬರ್ 4ರಂದು ₹84 ಇತ್ತು. ದರ ಏರಿಕೆ ಗಮನಿಸಿದ ಸರ್ಕಾರ, ತೆರಿಗೆಯಲ್ಲಿ ₹1.50 ಕಡಿತ ಮಾಡಿತ್ತು. ಕಂಪನಿಗಳು ಸಹ ಹೆಚ್ಚುವರಿಯಾಗಿ ಒಂದು ರೂಪಾಯಿ ಕಡಿತಗೊಳಿಸಿದ್ದರಿಂದ ದರ ₹2.50 ತಗ್ಗಿತ್ತು. ಆದರೆ 2019ರ ಜುಲೈನಲ್ಲಿ ಸರ್ಕಾರವು ತೆರಿಗೆಯನ್ನು ₹2 ರೂಪಾಯಿ ಹೆಚ್ಚಿಸಿದ ಕೂಡಲೇ ತೈಲ ಸರಬರಾಜು ಕಂಪನಿಗಳು ಒಂದು ರೂಪಾಯಿ ದರ ಹೆಚ್ಚಿಸಿದ್ದವು.

ಪೆಟ್ರೋಲ್ ಚಿಲ್ಲರೆ ಮಾರಾಟದಲ್ಲಿ ತೆರಿಗೆಯ ಪಾಲು ಎರಡನೇ ಮೂರರಷ್ಟಿದೆ. ಬಳಕೆದಾರರು ಪ್ರತಿ ಲೀಟರ್‌ಗೆ ಸರಿಸುಮಾರು ₹50.69 ಆಥವಾ ಶೇ 64ರಷ್ಟು ಹಣವನ್ನು ತೆರಿಗೆ ರೂಪದಲ್ಲಿ ಪಾವತಿಸಬೇಕಿದೆ. ಇದರಲ್ಲಿ ₹32.98 ಕೇಂದ್ರದ ತೆರಿಗೆಯಾದರೆ ₹17.71 ಸ್ಥಳೀಯ ತೆರಿಗೆ.

ಹಾಗೆಯೇ ಪ್ರತಿ ಲೀಟರ್ ಡೀಸೆಲ್ ಚಿಲ್ಲರೆ ಮಾರಾಟದಲ್ಲಿ ₹49.43 ಅಥವಾ ಶೇ 63ರಷ್ಟು ಹಣ ತೆರಿಗೆಗೆ ಹೋಗುತ್ತದೆ. ಇದರಲ್ಲಿ ಕೇಂದ್ರದ ತೆರಿಗೆ ₹31.83 ಹಾಗೂ ರಾಜ್ಯದ ತೆರಿಗೆ ₹17.60 ಇದೆ.

ಹೆಚ್ಚುವರಿ ಹಣಕಾಸು ಸಂಪನ್ಮೂಲ ಕ್ರೂಢೀಕರಣ ಉದ್ದೇಶದಿಂದ ಎರಡು ಬಾರಿ ದುಬಾರಿ ತೆರಿಗೆಯನ್ನು ಕೇಂದ್ರ ವಿಧಿಸಿತ್ತು. ಮಾರ್ಚ್ 14ರಂದು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ₹3 ಅಬಕಾರಿ ಸುಂಕ ಹಾಕಿತ್ತು. ಮೇ 5ರಂದು ಪೆಟ್ರೋಲ್‌ಗೆ ₹10, ಡೀಸೆಲ್‌ಗೆ ₹13 ದಾಖಲೆಯ ಸುಂಕ ವಿಧಿಸಿತ್ತು. ಈ ಎರಡೂ ಬೆಲೆ ಏರಿಕೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ₹2 ಲಕ್ಷ ಕೋಟಿ ಹರಿದುಬಂದಿತು.

ಸರ್ಕಾರಿ ಸ್ವಾಮ್ಯದ ತೈಲ ಸರಬರಾಜು ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪ್ ಲಿ. (ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್‌ಗಳು (ಎಚ್‌ಪಿಸಿಎಲ್) ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಿರುವ ತೈಲ ಬೆಲೆ ಇಳಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಬದಲು ತಮ್ಮ ನಷ್ಟಕ್ಕೆ ಹೊಂದಿಸಿಕೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.