ADVERTISEMENT

ಆರ್ಥಿಕ ವೃದ್ಧಿಗೆ ಕೊರೊನಾ ಅಡ್ಡಿ: ಭಾರತದ ಜಿಡಿಪಿ ಶೇ 3.6, ಇಂಡ್‌–ರೇ ಅಂದಾಜು

ಪಿಟಿಐ
Published 30 ಮಾರ್ಚ್ 2020, 21:23 IST
Last Updated 30 ಮಾರ್ಚ್ 2020, 21:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಆರ್ಥಿಕತೆಗೆ ಕೊರೊನಾ ವೈರಸ್‌ ತಂದೊಡ್ಡಿರುವ ಸಂಕಷ್ಟದಿಂದಾಗಿ 2020–21ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ 3.6ಕ್ಕೆ ಕುಸಿಯಲಿದೆ ಎಂದು ದೇಶಿ ಕ್ರೆಡಿಟ್‌ ರೇಟಿಂಗ್‌ ಸಂಸ್ಥೆಯಾಗಿರುವ ಇಂಡಿಯಾ ರೇಟಿಂಗ್ಸ್‌ (ಇಂಡ್‌–ರೇ) ಅಂದಾಜಿಸಿದೆ.

ಪೂರ್ಣ ಪ್ರಮಾಣದ ದಿಗ್ಬಂಧನ ಇಲ್ಲವೇ ಭಾಗಶಃ ದಿಗ್ಬಂಧನವು ಏಪ್ರಿಲ್‌ ಅಂತ್ಯದವರೆಗೆ ಮುಂದುವರೆಯಲಿದ್ದು, ಮೇ ನಂತರವೇ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳಲಿವೆ ಎಂದು ಸಂಸ್ಥೆ ಊಹಿಸಿದೆ.

ಏಪ್ರಿಲ್‌ 14ರವರೆಗೆ ಜಾರಿಯಲ್ಲಿ ಇರುವ ಮೂರು ವಾರಗಳ ದಿಗ್ಬಂಧನವು ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಇದರಿಂದ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳು ಇನ್ನಷ್ಟು ತೀವ್ರಗೊಳ್ಳಲಿವೆ. ಮಾರ್ಚ್‌ ತ್ರೈಮಾಸಿಕದಲ್ಲಿ ಜಿಡಿಪಿ ಶೇ 4.7ರಷ್ಟು ಇರಲಿದೆ. ಆದರೆ, ಜೂನ್‌ ತ್ರೈಮಾಸಿಕದಲ್ಲಿ ವೃದ್ಧಿ ದರ ಗಮನಾರ್ಹವಾಗಿ (ಶೇ 2.3) ಕುಗ್ಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ADVERTISEMENT

ಪ್ರತಿಕೂಲತೆಗಳು
ಪೂರೈಕೆ ಸರಣಿ ಕುಸಿದು ಬಿದ್ದಿರುವುದರಿಂದ ಆಯ್ದ ತಯಾರಿಕಾ ವಲಯಗಳ ಚಟುವಟಿಕೆಗಳು ಸ್ಥಗಿತಗೊಂಡಿವೆ. ಪ್ರವಾಸೋದ್ಯಮ, ಹೋಟೆಲ್‌ ಮತ್ತು ವಿಮಾನ ಯಾನ ಕ್ಷೇತ್ರಗಳು ಸಂಪೂರ್ಣವಾಗಿ ಕುಸಿದಿವೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸದ ಒತ್ತಡ ಹೆಚ್ಚಿದೆ. ಇವೆಲ್ಲವು ಕೊರೊನಾ ವೈರಸ್‌ ಹರಡುತ್ತಿರುವುದರಿಂದ ಕಂಡು ಬಂದಿರುವ ಅರಂಭಿಕ ಪರಿಣಾಮಗಳಾಗಿವೆ.

ಸಣ್ಣ ಉದ್ದಿಮೆಗಳ ನಗದು ಹರಿವಿನಲ್ಲಿ ಅಡಚಣೆ ಉಂಟಾಗಿದೆ.

ಹಣಕಾಸು ಸೇವೆ, ಮಾಹಿತಿ ತಂತ್ರಜ್ಞಾನ, ಐ.ಟಿ ಆಧಾರಿತ ಸೇವಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿ ತಮ್ಮ ಕಾರ್ಯ ನಿರ್ವಹಣೆಯನ್ನು ಕ್ಷಿಪ್ರವಾಗಿ ಮರು ಹೊಂದಾಣಿಕೆ ಮಾಡಿಕೊಂಡಿವೆ.

ಜಾಗತಿಕ ವಿದ್ಯಮಾನಗಳಿಂದ ದಿಗಿಲುಗೊಂಡಿರುವ ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ವಾಪಸ್‌ ಪಡೆಯುತ್ತಿದ್ದಾರೆ. ಇದರಿಂದ ರೂಪಾಯಿ ವಿನಿಮಯ ದರದ ಮೇಲೆ ಭಾರಿ ಒತ್ತಡ ಬಿದ್ದಿದೆ.

ಹೂಡಿಕೆದಾರರ ಸಂಪತ್ತು ಕರಗಿರುವುದು ಸರಕು ಮತ್ತು ಸೇವೆಗಳ ಬೇಡಿಕೆಯನ್ನೂ ಕುಗ್ಗಿಸಲಿದೆ.

ಕೃಷಿ ಮಾರುಕಟ್ಟೆಗಳು ಸಕಾಲದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸದ ಕಾರಣಕ್ಕೆ ರೈತರ ಆದಾಯಕ್ಕೆ ಕತ್ತರಿ ಬೀಳಲಿದೆ. ಇದರಿಂದ ಗ್ರಾಮೀಣ ಬೇಡಿಕೆ ಕುಸಿಯಲಿದೆ.

ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸಿರುವುದರಿಂದ ಉದ್ಯೋಗ ಅವಕಾಶ ಸೃಷ್ಟಿಸುವಲ್ಲಿ ಕೃಷಿ ನಂತರದ ಸ್ಥಾನದಲ್ಲಿ ಇರುವ ರಿಯಲ್‌ ಎಸ್ಟೇಟ್ ವಲಯದ ಸಮಸ್ಯೆಗಳು ಉಲ್ಬಣಗೊಳ್ಳಲಿವೆ.

ವಾಣಿಜ್ಯ ಮಳಿಗೆ ಮತ್ತು ಮಲ್ಟಿಪ್ಲೆಕ್ಸ್‌ಗಳು ಬಾಗಿಲು ಹಾಕಿರುವುದರಿಂದ ಗೃಹೋಪಯೋಗಿ ಸಲಕರಣೆ, ಮನರಂಜನೆ, ಕ್ರೀಡೆ, ಸಗಟು ವ್ಯಾಪಾರ, ಸಾರಿಗೆ ಕ್ಷೇತ್ರಗಳಲ್ಲಿ ವ್ಯತಿರಿಕ್ತ ಪರಿಣಾಮಗಳು ಕಂಡು ಬರಲಿವೆ.

ಸದವಕಾಶಗಳು
ಈ ಬಿಕ್ಕಟ್ಟು ಭಾರತಕ್ಕೆ ಹೊಸ ಅವಕಾಶಗಳ ಬಾಗಿಲನ್ನೂ ತೆರೆಯಲಿದೆ. ಸಂಭವನೀಯ ನಷ್ಟ ತಪ್ಪಿಸುವ ಕಾರ್ಯತಂತ್ರದ ಭಾಗವಾಗಿ ಚೀನಾದ ಮೇಲಿನ ಅವಲಂಬನೆ ತಗ್ಗಿಸುವ ಚಿಂತನೆ ಕಾರ್ಯರೂಪಕ್ಕೆ ಬರಲಿದೆ ಎಂದು ಸಂಸ್ಥೆ ಅಂದಾಜಿಸಿದೆ.

ವಾಹನ, ಔಷಧಿ ತಯಾರಿಕೆ, ಎಲೆಕ್ಟ್ರಾನಿಕ್ಸ್‌ ಮತ್ತು ರಾಸಾಯನಿಕ ಉತ್ಪನ್ನಗಳ ಪೂರೈಕೆಯಲ್ಲಿನ ಅಡಚಣೆಯು ದೇಶಿ ತಯಾರಿಕಾ ವಲಯದ ಅವಕಾಶಗಳನ್ನು ಹೆಚ್ಚಿಸಲಿದೆ.

ಕಚ್ಚಾ ತೈಲದ ಬೆಲೆ ಅಗ್ಗವಾಗಿರುವುದರಿಂದ ಆಮದು ವೆಚ್ಚ ಗಮನಾರ್ಹವಾಗಿ ಕಡಿಮೆಯಾಗಲಿದೆ.

ಅಂಕಿ ಅಂಶ

2.8 %: ಹಣಕಾಸು ವರ್ಷದ ಮೊದಲಾರ್ಧದಲ್ಲಿನ ಪ್ರಗತಿ

4.3 %: ದ್ವಿತೀಯಾರ್ಧದಲ್ಲಿ ಚೇತರಿಕೆ ಸಾಧ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.