ADVERTISEMENT

ಜಿಡಿಪಿ ಶೇ 1.9: ಇಂಡ್‌–ರೇ ಅಂದಾಜು

ಜೂನ್‌ ಅಂತ್ಯದಿಂದ ಆರ್ಥಿಕ ಚಟುವಟಿಕೆ ಚೇತರಿಕೆ ನಿರೀಕ್ಷೆ

ಪಿಟಿಐ
Published 27 ಏಪ್ರಿಲ್ 2020, 21:10 IST
Last Updated 27 ಏಪ್ರಿಲ್ 2020, 21:10 IST
   
""

ನವದೆಹಲಿ: ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ (ಇಂಡ್‌–ರೇ), 2020–21ರಲ್ಲಿನ ಭಾರತದ ಆರ್ಥಿಕ ವೃದ್ಧಿ ದರದ ಅಂದಾಜನ್ನುಪರಿಷ್ಕರಿಸಿ ಶೇ 1.9ಕ್ಕೆ ತಗ್ಗಿಸಿದೆ.

’ಕೋವಿಡ್‌–19’ ಪಿಡುಗು ನಿಯಂತ್ರಿಸಲು ಜಾರಿಯಲ್ಲಿ ಇರುವ ಲಾಕ್‌ಡೌನ್‌ ಕಾರಣಕ್ಕೆ ವೃದ್ಧಿ ದರವು (ಜಿಡಿಪಿ) 29 ವರ್ಷಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಕುಸಿಯಲಿದೆ ಎಂದು ಅಂದಾಜಿಸಿದೆ. ಸಂಸ್ಥೆಯ ಪ್ರಕಾರ, 1991–92ರಲ್ಲಿ ಜಿಡಿಪಿಯು ಶೇ 1.1ರಷ್ಟು ದಾಖಲಾಗಿತ್ತು.

ಮಾರ್ಚ್‌ 30ರಂದು ಪ್ರಕಟಿಸಲಾಗಿದ್ದ ಅಂದಾಜಿನಲ್ಲಿ ಜಿಡಿಪಿಯು ಶೇ 3.6ರಷ್ಟು ಇರಲಿದೆ ಎಂದು ಸೂಚಿಸಿತ್ತು. ಭಾಗಶಃ ಲಾಕ್‌ಡೌನ್‌ ಮೇ ತಿಂಗಳ ಮಧ್ಯ ಭಾಗದವರೆಗೆ ಮುಂದುವರೆಯಲಿದೆ ಎನ್ನುವ ಊಹೆ ಆಧರಿಸಿ ಈ ಪರಿಷ್ಕೃತ ಅಂದಾಜು ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

ಜುಲೈ – ಸೆಪ್ಟೆಂಬರ್‌ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಮರಳಲಿವೆ ಎಂದು ನಿರೀಕ್ಷಿಸಲಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಹಬ್ಬದ ದಿನಗಳ ಬೇಡಿಕೆ ಹೆಚ್ಚಲಿದೆ. ಇದರಿಂದಾಗಿ ಪ್ರಸಕ್ತ ಸಾಲಿನ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್‌– ಡಿಸೆಂಬರ್‌) ಜಿಡಿಪಿಯು 2019–20ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ಮಟ್ಟದಲ್ಲಿ ಇರಲಿದೆ.

ಮೇ ಮಧ್ಯಭಾಗದಿಂದಲೂ ಲಾಕ್‌ಡೌನ್‌ ಮುಂದುವರೆದರೆ ಜೂನ್‌ ಅಂತ್ಯದಿಂದ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಚೇತರಿಸಿಕೊಳ್ಳಲಿವೆ. ಜಿಡಿಪಿ ಪ್ರಗತಿಯು ಋಣಾತ್ಮಕ ಮಟ್ಟಕ್ಕೆ ಶೇ 2.1ಕ್ಕೆ ಕುಸಿಯುವ ಅಪಾಯ ಇದೆ. ಹಾಗೊಂದು ವೇಳೆ ಅದು ಘಟಿಸಿದರೆ ಈ ವೃದ್ಧಿ ದರವು 41 ವರ್ಷಗಳಲ್ಲಿನ ಅತ್ಯಂತ ಕನಿಷ್ಠ ಮಟ್ಟವಾಗಿರಲಿದೆ.

ವಿತ್ತೀಯ ಕೊರತೆ ಹೆಚ್ಚಳ
ಲಾಕ್‌ಡೌನ್‌ ಮತ್ತು ಆರ್ಥಿಕ ಪ್ರಗತಿಯಲ್ಲಿನ ಕುಸಿತದ ಕಾರಣಕ್ಕೆ ಸರ್ಕಾರಗಳ ತೆರಿಗೆ ಮತ್ತು ತೆರಿಗೆಯೇತರ ವರಮಾನ ಕಡಿಮೆಯಾಗಲಿದೆ. ತೆರಿಗೆ ಉತ್ತೇಜನಾ ಕೊಡುಗೆಗಳನ್ನು ಪ್ರಕಟಿಸಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು ಪರಿಸ್ಥಿತಿಯ ಲೆಕ್ಕಾಚಾರಗಳೆಲ್ಲ ತಲೆಕೆಳಗು ಆಗಲಿವೆ.

ಸರ್ಕಾರವು ಇನ್ನಷ್ಟು ತೆರಿಗೆ ಉತ್ತೇಜನಾ ಕೊಡುಗೆಗಳನ್ನು ಪ್ರಕಟಿಸದಿದ್ದರೂ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಜಿಡಿಪಿಯ ಶೇ 4.4ಕ್ಕೆ ಏರಿಕೆಯಾಗಲಿದೆ. ಸರ್ಕಾರದ ಉತ್ತೇಜನಾ ಕೊಡುಗೆಗಳ ಒಟ್ಟಾರೆ ಮೊತ್ತವು ₹ 4 ಲಕ್ಷ ಕೋಟಿಗೆ ತಲುಪಿದರೆ ವಿತ್ತೀಯ ಕೊರತೆಯು ಜಿಡಿಪಿಯ ಶೇ 6ಕ್ಕೆ ಏರಿಕೆಯಾಗಲಿದೆ ಎಂದೂ ‘ಇಂಡ್‌ – ರೇ’ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.