ADVERTISEMENT

ಹಣಕಾಸಿನ ಒಳಗೊಳ್ಳುವಿಕೆಯಲ್ಲಿ ಭಾರತ ಚೀನಾಕ್ಕಿಂತ ಮುಂದು

ಪಿಟಿಐ
Published 8 ನವೆಂಬರ್ 2021, 13:41 IST
Last Updated 8 ನವೆಂಬರ್ 2021, 13:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಹಣಕಾಸು ಒಳಗೊಳ್ಳುವಿಕೆಯ ಮಾಪಕಗಳಲ್ಲಿ ಭಾರತವು ಈಗ ಚೀನಾಗಿಂತಲೂ ಮುಂದೆ ಇದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ಬಿಐ) ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ. 2020ರಲ್ಲಿ ದೇಶದಲ್ಲಿ ಪ್ರತಿ ಸಾವಿರ ವ್ಯಕ್ತಿಗಳಿಗೆ 13,615 ಇಂಟರ್ನೆಟ್ ಬ್ಯಾಂಕಿಂಗ್ ವಹಿವಾಟುಗಳು ನಡೆದಿವೆ.

2015ರಲ್ಲಿ ಪ್ರತಿ ಸಾವಿರ ವ್ಯಕ್ತಿಗಳಿಗೆ 183 ವಹಿವಾಟುಗಳು ನಡೆದಿದ್ದವು. ದೇಶದಲ್ಲಿ 2020ರಲ್ಲಿ ಪ್ರತಿ 1 ಲಕ್ಷ ವಯಸ್ಕರಿಗೆ 14.7ರಷ್ಟು ಬ್ಯಾಂಕ್ ಶಾಖೆಗಳು ಇದ್ದವು. 2015ರಲ್ಲಿ ಇದು 13.6ರಷ್ಟು ಮಾತ್ರ ಇತ್ತು. 2020ರಲ್ಲಿನ ಭಾರತದಲ್ಲಿನ ಬ್ಯಾಂಕ್ ಶಾಖೆಗಳ ಪ್ರಮಾಣವು ಜರ್ಮನಿ, ಚೀನಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ಸಾವಿರ ಜನರಿಗೆ ಇರುವ ಶಾಖೆಗಳ ಪ್ರಮಾಣಕ್ಕಿಂತ ಜಾಸ್ತಿ ಎಂದು ಎಸ್‌ಬಿಐ ವರದಿ ಹೇಳಿದೆ.

ಹಣಕಾಸಿನ ಒಳಗೊಳ್ಳುವಿಕೆ ಹೆಚ್ಚು ಇರುವ, ಬ್ಯಾಂಕ್ ಖಾತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ರಾಜ್ಯಗಳಲ್ಲಿ ಅಪರಾಧ ಪ್ರಮಾಣ ಗಣನೀಯವಾಗಿ ತಗ್ಗಿದೆ, ಮದ್ಯ ಮತ್ತು ತಂಬಾಕು ಸೇವನೆ ಅಲ್ಲಿ ಕಡಿಮೆ ಆಗಿದೆ ಎಂದು ಎಸ್‌ಬಿಐ ಮುಖ್ಯ ಅರ್ಥಶಾಸ್ತ್ರಜ್ಞ ಸೌಮ್ಯಕಾಂತಿ ಘೋಷ್ ಅವರು ಸಿದ್ಧಪಡಿಸಿರುವ ವರದಿಯು ಹೇಳಿದೆ.

ADVERTISEMENT

ಶೂನ್ಯ ಬ್ಯಾಲೆನ್ಸ್ ಅಥವಾ ಅತ್ಯಂತ ಕಡಿಮೆ ಬ್ಯಾಲೆನ್ಸ್‌ನೊಂದಿಗೆ ಬ್ಯಾಂಕ್ ಖಾತೆ ಆರಂಭಿಸುವ ಯೋಜನೆಗಳ ಅಡಿಯಲ್ಲಿ ಬ್ಯಾಂಕ್ ಖಾತೆ ಹೊಂದಿರುವವರ ಸಂಖ್ಯೆಯು ಹೆಚ್ಚಾಗಿದೆ. ಡಿಜಿಟಲ್ ಪಾವತಿಗಳ ಸಂಖ್ಯೆಯಲ್ಲಿ ಕೂಡ ಗುರುತರ ಬೆಳವಣಿಗೆ ಸಾಧ್ಯವಾಗಿದೆ.

ಆರ್ಥಿಕ ಒಳಗೊಳ್ಳುವಿಕೆಗೆ ಕಳೆದ ಏಳು ವರ್ಷಗಳಿಂದ ನಡೆಸಿದ ಅಭಿಯಾನದಲ್ಲಿ 43.7 ಕೋಟಿ ಶೂನ್ಯ ಬ್ಯಾಲೆನ್ಸ್ ಖಾತೆಗಳನ್ನು ಆರಂಭಿಸಲಾಗಿದೆ. ಈ ಖಾತೆಗಳಲ್ಲಿ ಅಕ್ಟೋಬರ್‌ 20ರ ವೇಳೆಗೆ ಇದ್ದ ಠೇವಣಿಯ ಒಟ್ಟು ಮೊತ್ತ ₹ 1.46 ಲಕ್ಷ ಕೋಟಿ. ಈ ಪೈಕಿ ಸರಿಸುಮಾರು ಮೂರನೆಯ ಎರಡರಷ್ಟು ಖಾತೆಗಳು ಗ್ರಾಮೀಣ ಹಾಗೂ ಅರೆ ಪಟ್ಟಣ ಪ್ರದೇಶಗಳ ಜನರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.