ADVERTISEMENT

ದೇಶದ ತಯಾರಿಕಾ ವಲಯದ ಚಟುವಟಿಕೆ 3 ತಿಂಗಳ ಗರಿಷ್ಠ ಮಟ್ಟಕ್ಕೆ

ರಾಯಿಟರ್ಸ್‌
Published 1 ಸೆಪ್ಟೆಂಬರ್ 2023, 14:08 IST
Last Updated 1 ಸೆಪ್ಟೆಂಬರ್ 2023, 14:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ದೇಶದ ತಯಾರಿಕಾ ವಲಯದ ಚಟುವಟಿಕೆಯು ಆಗಸ್ಟ್‌ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಶುಕ್ರವಾರ ಹೇಳಿದೆ.

ತಯಾರಿಕಾ ವಲಯದ ಬೆಳವಣಿಗೆಯನ್ನು ಸೂಚಿಸುವ ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಜುಲೈನಲ್ಲಿ 57.7ರಷ್ಟು ಇದ್ದಿದ್ದು ಆಗಸ್ಟ್‌ನಲ್ಲಿ 58.6ಕ್ಕೆ ಏರಿಕೆ ಕಂಡಿದೆ. ಮೇ ತಿಂಗಳ ಬಳಿಕ ಆಗಿರುವ ಗರಿಷ್ಠ ಮಟ್ಟದ ಬೆಳವಣಿಗೆ ಇದಾಗಿದೆ ಎಂದು ಹೇಳಿದೆ.

ಆಗಸ್ಟ್‌ ತಿಂಗಳ ಬೆಳವಣಿಗೆಯು ದೇಶದ ತಯಾರಿಕಾ ವಲಯದ ಸಕಾರಾತ್ಮಕ ಚಿತ್ರಣವನ್ನು ತೋರಿಸುತ್ತಿದೆ. ತಯಾರಿಕೆ ಹೆಚ್ಚಾಗುತ್ತಿರುವುದು ಮತ್ತು ಹೊಸ ವಹಿವಾಟುಗಳಿಗೆ ಬೇಡಿಕೆಯು ತ್ವರಿತವಾಗಿ ಏರಿಕೆ ಕಾಣುತ್ತಿದೆ. ಇದು ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡಲಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ಹೇಳಿದ್ದಾರೆ.

ADVERTISEMENT

ಕಂಪನಿಗಳು ಜಾಗತಿಕ ಮಾರುಕಟ್ಟೆಯತ್ತ ಹೆಚ್ಚಿನ ಗಮನ ಹರಿಸಿವೆ. ಅಂತರರಾಷ್ಟ್ರೀಯ ಮಾರಾಟವು ಬಹಳ ವೇಗವಾಗಿ ಹೆಚ್ಚಾಗುತ್ತಿದೆ. ರಫ್ತು ಮಾಡುವ ನಿಟ್ಟಿನಲ್ಲಿ ಕಂಪನಿಗಳು ಯೋಜನೆ ರೂಪಿಸುವ ಮೂಲಕ ಮುಂದಿನ ಕೆಲವು ತಿಂಗಳುಗಳವರೆಗೆ ತಯಾರಿಕೆಯು ಏರುಮುಖವಾಗಿಯೇ ಇರುವಂತೆ ನೋಡಿಕೊಳ್ಳಬೇಕಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಆಗಸ್ಟ್‌ನಲ್ಲಿ ಉದ್ಯೋಗ ಸೃಷ್ಟಿಯು ಏಪ್ರಿಲ್‌ ತಿಂಗಳ ನಂತರ ಕನಿಷ್ಠ ಮಟ್ಟದಲ್ಲಿ ದಾಖಲಾಗಿದೆ. ಹೀಗಿದ್ದರೂ ಉದ್ಯೋಗ ಸೃಷ್ಟಿಯು ಸತತ ಐದನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಮಟ್ಟದಲ್ಲಿಯೇ ಇದೆ. ಹಣದುಬ್ಬರದ ಆತಂಕದಿಂದಾಗಿ  ಮುಂದಿನ 12 ತಿಂಗಳುಗಳಿಗೆ ವಹಿವಾಟು ನಡೆಸುವ ವಿಶ್ವಾಸವು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ 15 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ.

ತಯಾರಿಕಾ ವೆಚ್ಚವು ಆಗಸ್ಟ್‌ನಲ್ಲಿ ವೇಗದಲ್ಲಿ ಹೆಚ್ಚಾಗಿದೆ. ಹೀಗಿದ್ದರೂ ಎಲ್ಲ ವೆಚ್ಚವನ್ನೂ ಗ್ರಾಹಕರಿಗೆ ವರ್ಗಾಯಿಸಲಾಗಿಲ್ಲ ಎಂದು ಸಂಸ್ಥೆಯು ಹೇಳಿದೆ.

ತಯಾರಿಕಾ ವಲಯದ ಬೆಳವಣಿಗೆ ಸೂಚ್ಯಂಕ

ಮೇ; 58.7

ಜೂನ್‌; 57.8

ಜುಲೈ; 57.7

ಆಗಸ್ಟ್‌; 58.6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.