ADVERTISEMENT

ರೆಪೊ ಆಧರಿಸಿದ ಸಾಲದ ಬಡ್ಡಿ ದರ: ದಾಸ್‌ ಒತ್ತಾಯ

ಪಿಟಿಐ
Published 19 ಆಗಸ್ಟ್ 2019, 19:46 IST
Last Updated 19 ಆಗಸ್ಟ್ 2019, 19:46 IST
ಶಕ್ತಿಕಾಂತ್‌ ದಾಸ್‌
ಶಕ್ತಿಕಾಂತ್‌ ದಾಸ್‌   

ಮುಂಬೈ: ‘ರೆಪೊ ದರ ಆಧರಿಸಿ ಸಾಲ ಮತ್ತು ಠೇವಣಿಗಳ ಮೇಲಿನ ಬಡ್ಡಿ ದರ ನಿಗದಿಪಡಿಸುವ ಹೊಸ ವ್ಯವಸ್ಥೆಗೆ ಇಡೀ ಬ್ಯಾಂಕಿಂಗ್‌ ವ್ಯವಸ್ಥೆಯು ಬದಲಾಗುವ ತುರ್ತು ಅಗತ್ಯ ಇದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಸೇರಿದಂತೆ ಸರ್ಕಾರಿ ಸ್ವಾಮ್ಯದ 12ಕ್ಕೂ ಹೆಚ್ಚು ಬ್ಯಾಂಕ್‌ಗಳು ಈಗಾಗಲೇ ಈ ವ್ಯವಸ್ಥೆ ಅಳವಡಿಸಿಕೊಂಡಿವೆ.

ಎಸ್‌ಬಿಐ ತನ್ನ ಸಾಲ ಮತ್ತು ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಕ್ರಮವಾಗಿ ಈ ವರ್ಷದ ಮೇ ಮತ್ತು ಜುಲೈ ತಿಂಗಳಿನಿಂದ ಹೊಸ ವ್ಯವಸ್ಥೆಗೆ ಅನ್ವಯಿಸಿ ಜಾರಿಗೆ ತಂದಿದೆ. ಬ್ಯಾಂಕ್‌ ಆಫ್‌ ಬರೋಡಾ, ಯೂನಿಯನ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ಮುಂತಾದವು ಕಳೆದ ವಾರ ಇದೇ ನೀತಿ ಅನುಸರಿಸಿವೆ. ಬ್ಯಾಂಕ್‌ಗಳ ದುರ್ಬಲ ಹಣಕಾಸು ಸ್ಥಿತಿಗತಿಯ ಕಾರಣಕ್ಕೆ ಆರ್‌ಬಿಐ ಈ ಬಗ್ಗೆ ಒತ್ತಡವನ್ನೇನೂ ಹೇರಿಲ್ಲ.

ADVERTISEMENT

‘ರೆಪೊ ದರ ಆಧರಿಸಿದ ಸಾಲ ಮತ್ತು ಠೇವಣಿ ಮೇಲಿನ ಬಡ್ಡಿ ದರಕ್ಕೆ ಬದಲಾಗುವ ಪ್ರಕ್ರಿಯೆ ಹೆಚ್ಚು ತ್ವರಿತಗೊಳ್ಳಬೇಕಾಗಿದೆ. ಈ ಬಗ್ಗೆ ಬ್ಯಾಂಕ್‌ಗಳು ಸಕಾರಾತ್ಮಕ ಧೋರಣೆ ತಳೆದಿವೆ. ಹೊಸ ಸಾಲಗಳಿಗೆ ಈ ನಿಯಮ ಅನ್ವಯವಾಗುವುದರ ಬಗ್ಗೆ ಆರ್‌ಬಿಐ ನಿಗಾ ವಹಿಸಲಿದೆ’ ಎಂದು ದಾಸ್‌ ಹೇಳಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಸಂಘಗಳ ಒಕ್ಕೂಟವು (ಫಿಕ್ಕಿ) ಇಲ್ಲಿ ಏರ್ಪಡಿಸಿದ್ದ ವಾರ್ಷಿಕ ಬ್ಯಾಂಕಿಂಗ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಆರ್ಥಿಕತೆಯಲ್ಲಿನ ನಿರಾಶೆದಾಯಕ ಪರಿಸ್ಥಿತಿ ಕುರಿತ ಮನಸ್ಥಿತಿಯಿಂದ ಯಾರೊಬ್ಬರಿಗೂ ಪ್ರಯೋಜನ ದೊರೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಸಕಾರಾತ್ಮಕ ಸಂಗತಿಗಳತ್ತ ಗಮನ ಹರಿಸುವುದು ಹೆಚ್ಚು ಮುಖ್ಯವಾಗಿರುತ್ತದೆ. ಆರ್ಥಿಕ ಬೆಳವಣಿಗೆ ದರವು ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಇರುವುದು ಜಾಗತಿಕ ಹಣಕಾಸು ಸ್ಥಿರತೆಗೆ ಗಂಡಾಂತರ ಒಡ್ಡಲಿದೆ’ ಎಂದೂ ಅವರು ಎಚ್ಚರಿಸಿದ್ದಾರೆ.

*
ಹಳೆಯ ಸಾಲಗಾರರಿಗೂ ರೆಪೊ ದರ ಆಧರಿಸಿದ ಬಡ್ಡಿ ದರ ಅನ್ವಯಿಸುವುದನ್ನುಪರಿಶೀಲಿಸಲಾಗುತ್ತಿದೆ.
-ರಜನೀಶ್‌ ಕುಮಾರ್, ಎಸ್‌ಬಿಐ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.