ADVERTISEMENT

ಐರೋಪ್ಯ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ: ಭಾರತದ ಉತ್ಪನ್ನಗಳಿಗೆ ಸುಂಕ ಇಳಿಕೆ?

ಪಿಟಿಐ
Published 26 ಜನವರಿ 2026, 20:02 IST
Last Updated 26 ಜನವರಿ 2026, 20:02 IST
   

ನವದೆಹಲಿ: ಕಾರ್ಮಿಕರ ಶ್ರಮ, ಅವರ ಭಾಗೀದಾರಿಕೆ ತೀವ್ರ ಪ್ರಮಾಣದಲ್ಲಿಇರುವ ವಲಯಗಳಿಗೆ ಸೇರಿದ ಉತ್ಪನ್ನಗಳ ಮೇಲಿನ ಸುಂಕ ಇಳಿಕೆಯು ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಭಾಗವಾಗಿರುವ ನಿರೀಕ್ಷೆ ಇದೆ.

ಅಂದರೆ, ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಜಾರಿಗೆ ಬಂದ ನಂತರದಲ್ಲಿ ಯುರೋಪಿನ ಕಾರುಗಳು, ವೈನ್‌ನಂತಹ ಉತ್ಪನ್ನಗಳ ಬೆಲೆಯು ಭಾರತದ ಮಾರುಕಟ್ಟೆಯಲ್ಲಿ ಇಳಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಎಫ್‌ಟಿಎ ಕುರಿತ ಮಾತುಕತೆಗಳು ಪೂರ್ಣಗೊಂಡಿರುವ ವಿಚಾರವನ್ನು ಭಾರತ ಹಾಗೂ ಇ.ಯು ಪ್ರಮುಖರು ಮಂಗಳವಾರ ಘೋಷಿಸಲಿದ್ದಾರೆ.

ಸೇವಾ ವಲಯಗಳಿಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿ ಸಡಿಲಿಕೆ ತರುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಭಾರತದ ತನ್ನ ಜವಳಿ, ಚರ್ಮೋದ್ಯಮ, ವಸ್ತ್ರ, ಆಭರಣ ಮತ್ತು ಹರಳು, ಕರಕುಶಲ ಉತ್ಪನ್ನಗಳಿಗೆ ಯುರೋಪಿನ ಮಾರುಕಟ್ಟೆಗೆ ಸುಂಕರಹಿತವಾಗಿ ಪ್ರವೇಶಿಸಲು ಅವಕಾಶ ಸಿಗಬೇಕು ಎಂದು ಒತ್ತಾಯಿಸಿದೆ. ಭಾರತವು ಅಂತಿಮಗೊಳಿಸಿರುವ ಎಲ್ಲ ಎಫ್‌ಟಿಎಗಳಲ್ಲಿ ಇದೇ ಬೇಡಿಕೆಯನ್ನೇ ಪ್ರಮುಖವಾಗಿ ಇರಿಸಲಾಗಿದೆ. ಅಲ್ಲದೆ, ಭಾರತದ ಜೊತೆ ಎಫ್‌ಟಿಎ ಅಂತಿಮಗೊಳಿಸಿರುವ ಬ್ರಿಟನ್‌, ಯುಎಇ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಎಲ್ಲ ದೇಶಗಳು ಈ ಬೇಡಿಕೆಗೆ ಒಪ್ಪಿವೆ.

ಐರೋಪ್ಯ ಒಕ್ಕೂಟವು ತನ್ನಲ್ಲಿ ತಯಾರಾಗುವ ವಾಹನಗಳು, ವೈನ್‌ ಸೇರಿದಂತೆ ವಿವಿಧ ಬಗೆಯ ಮದ್ಯಕ್ಕೆ ಸುಂಕ ಇಳಿಕೆಯ ಪ್ರಯೋಜನ ನೀಡಬೇಕು ಎಂದು ಒತ್ತಾಯಿಸುತ್ತಿದೆ. ಭಾರತವು ಬ್ರಿಟನ್‌ ಜೊತೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದಲ್ಲಿ, ವಾಹನ ವಲಯಕ್ಕೆ ಕೋಟಾ ಆಧಾರಿತ ಸುಂಕ ವಿನಾಯಿತಿಯನ್ನು ನೀಡಿದೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಜೊತೆಗಿನ ಒಪ್ಪಂದಗಳಲ್ಲಿ ವೈನ್‌ಗಳ ಬಗ್ಗೆ ಪ್ರಸ್ತಾಪ ಇದೆ. ಆಸ್ಟ್ರೇಲಿಯಾದ ವೈನ್‌ಗಳಿಗೆ ಭಾರತವು 10 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ರಿಯಾಯಿತಿಗಳನ್ನು ಒದಗಿಸಿದೆ.

ಹಿಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ವಿಶೇಷ ಕಾರ್ಯದರ್ಶಿ ಆಗಿದ್ದ (ಈಗ ವಾಣಿಜ್ಯ ಕಾರ್ಯದರ್ಶಿ) ರಾಜೇಶ್ ಅಗರ್ವಾಲ್ ಅವರು, ‘ಇ.ಯು ಜೊತೆಗಿನ ಪ್ರಸ್ತಾವಿತ ಒಪ್ಪಂದವು ಭಾರತದ ಆಟೊಮೊಬೈಲ್‌ ಉದ್ಯಮಕ್ಕೆ ರಫ್ತು ಹೆಚ್ಚಿಸಲು ಭಾರಿ ಪ್ರಮಾಣದ ಅವಕಾಶ ಒದಗಿಸಲಿದೆ, ಒಕ್ಕೂಟದ ಆಟೊಮೊಬೈಲ್‌ ಕಂಪನಿಗಳ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ನೆರವಾಗಲಿದೆ’ ಎಂದು ತಿಳಿಸಿದ್ದರು.

ಈಗ ಶೇ 10ರಷ್ಟು ಸುಂಕ:

ಭಾರತದ ಸರಕುಗಳಿಗೆ ಐರೋಪ್ಯ ಒಕ್ಕೂಟವು ವಿಧಿಸುತ್ತಿರುವ ಸುಂಕದ ಪ್ರಮಾಣವು ಸರಿಸುಮಾರು ಶೇ 3.8ರಷ್ಟಿದೆ. ಆದರೆ ಕಾರ್ಮಿಕರ ಅಗತ್ಯವು ಹೆಚ್ಚಿನ ಮಟ್ಟದಲ್ಲಿ ಇರುವ ವಲಯಗಳ ಸರಕುಗಳಿಗೆ ಶೇ 10ರಷ್ಟು ಆಮದು ಸುಂಕವನ್ನು ಒಕ್ಕೂಟವು ವಿಧಿಸುತ್ತಿದೆ.

ಈಗ ಭಾರತವು ಯುರೋಪಿನ ಉತ್ಪನ್ನಗಳಿಗೆ ಸರಾಸರಿ ಶೇ 9.3ರಷ್ಟು ಸುಂಕ ವಿಧಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ವಾಹನ ಹಾಗೂ ಅವುಗಳ ಬಿಡಿಭಾಗಗಳು (ಶೇ 35.5ರಷ್ಟು), ಪ್ಲಾಸ್ಟಿಕ್‌ (ಶೇ 10.4ರಷ್ಟು), ರಾಸಾಯನಿಕಗಳು ಹಾಗೂ ಔಷಧಗಳಿಗೆ (ಶೇ 9.9ರಷ್ಟು) ಹೆಚ್ಚಿನ ಪ್ರಮಾಣದಲ್ಲಿ ಸುಂಕ ವಿಧಿಸಲಾಗುತ್ತಿದೆ. ಭಾರತವು ಐರೋಪ್ಯ ಒಕ್ಕೂಟದಿಂದ ಆಮದಾಗುವ ಮದ್ಯದ ಪೇಯಗಳಿಗೆ ಶೇ 100ರಿಂದ ಶೇ 125ರಷ್ಟು ಸುಂಕ ವಿಧಿಸುತ್ತಿದೆ.

ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ವಲಯಗಳನ್ನು ಒಪ್ಪಂದದ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ. ಒಕ್ಕೂಟವು ತನ್ನಲ್ಲಿನ ದನದ ಮಾಂಸ, ಸಕ್ಕರೆ ಮತ್ತು ಅಕ್ಕಿ ಮಾರುಕಟ್ಟೆಯನ್ನು ಒಪ್ಪಂದದ ವ್ಯಾಪ್ತಿಗೆ ತಂದಿಲ್ಲ. ಭಾರತವು ತನ್ನ ಕೃಷಿ ವಲಯ, ಹೈನುಗಾರಿಕೆ ವಲಯವನ್ನು ವಿದೇಶಿ ಪೈ‍ಪೋಟಿಗೆ ಒಡ್ಡಲು ಒಪ್ಪಿಲ್ಲ.

ಐರೋಪ್ಯ ಒಕ್ಕೂಟದ ಜೊತೆಗಿನ ವ್ಯಾಪಾರ ಒಪ್ಪಂದದ ಬಗ್ಗೆ ಇಂದು ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ವ್ಯಾಪಾರ ಒಪ್ಪಂದಕ್ಕಾಗಿ ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನಿ ಅವರು ಮಾರ್ಚ್‌ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಈ ಮಧ್ಯೆ, ಭಾರತದ ಜತೆಗಿನ ಒಪ್ಪಂದ ವಿಳಂಬ ಆಗಿರುವುದಕ್ಕೆ ಅಮೆರಿಕದಲ್ಲಿ ಅಪಸ್ವರವೂ ಎದ್ದಿದೆ

ಭಾರತದ ಉದ್ಯಮಕ್ಕೆ ಧಕ್ಕೆ ಇಲ್ಲ: ಜಿಟಿಆರ್‌ಐ

ನವದೆಹಲಿ: ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಘೋಷಣೆ ಆಗಲಿರುವ ಮುಕ್ತ ವ್ಯಾಪಾರ ಒಪ್ಪಂದವು ಜಾರಿಗೆ ಬಂದ ನಂತರದಲ್ಲಿ ವ್ಯಾಪಾರ ವಹಿವಾಟುಗಳು ಹೆಚ್ಚಬಹುದೇ ವಿನಾ ದೇಶಿ ಉದ್ಯಮಕ್ಕೆ ಅದರಿಂದ ಧಕ್ಕೆ ಆಗುವುದಿಲ್ಲ ಎಂದು ಜಿಟಿಆರ್‌ಐ ಹೇಳಿದೆ.

ಗ್ಲೋಬಲ್ ಟ್ರೇಡ್ ರಿಸರ್ಚ್‌ ಇನಿಷಿಯೇಟಿವ್‌ (ಜಿಟಿಆರ್‌ಐ) ಸಂಸ್ಥೆಯು ವ್ಯಾಪಾರ, ವಹಿವಾಟುಗಳಿಗೆ ಸಂಬಂಧಿಸಿದ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಒಪ್ಪಂದದ ಪರಿಣಾಮವಾಗಿ ವೆಚ್ಚ ತಗ್ಗಲಿದೆ, ವ್ಯಾಪಾರ ಹೆಚ್ಚಾಗಲಿದೆ ಎಂದು ಅದು ಅಂದಾಜಿಸಿದೆ.

ಭಾರತದಿಂದ ಯುರೋಪಿಗೆ ರಫ್ತು: ಸ್ಮಾರ್ಟ್‌ಫೋನ್‌, ಜವಳಿ, ಪಾದರಕ್ಷೆ, ಔಷಧ, ವಾಹನಗಳ ಬಿಡಿಭಾಗಗಳು, ಸಂಸ್ಕರಿತ ಇಂಧನ, ಕತ್ತರಿಸಿದ ವಜ್ರ

ಯುರೋಪಿನಿಂದ ಭಾರತಕ್ಕೆ ಆಮದು:ಉನ್ನತ ತಂತ್ರಜ್ಞಾನದ ಯಂತ್ರಗಳು, ವಿಮಾನಗಳು, ಪ್ರಮುಖ ಎಲೆಕ್ಟ್ರಾನಿಕ್‌ ಬಿಡಿಭಾಗಗಳು, ರಾಸಾಯನಿಕಗಳು, ಗುಣಮಟ್ಟದ ವೈದ್ಯಕೀಯ ಉಪಕರಣಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.