ADVERTISEMENT

ಅಮೆರಿಕದ ಸುಂಕ ಹೇರಿಕೆಯಿಂದ ರಫ್ತು ಇಳಿಕೆ: ₹3.69 ಲಕ್ಷ ಕೋಟಿ ವ್ಯಾಪಾರ ಕೊರತೆ

ಪಿಟಿಐ
Published 17 ನವೆಂಬರ್ 2025, 15:21 IST
Last Updated 17 ನವೆಂಬರ್ 2025, 15:21 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಅಕ್ಟೋಬರ್ ತಿಂಗಳಿನಲ್ಲಿ ದೇಶದ ವ್ಯಾಪಾರ ಕೊರತೆಯ ಅಂತರವು ₹3.69 ಲಕ್ಷ ಕೋಟಿಯಷ್ಟಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಭಾರತದಿಂದ ಆಗಿರುವ ರಫ್ತು ಶೇ 11.8ರಷ್ಟು ಇಳಿಕೆ ಆಗಿದ್ದು, ₹3 ಲಕ್ಷ ಕೋಟಿಯಷ್ಟು ಆಗಿದೆ. ಅಮೆರಿಕವು ದೇಶದಿಂದ ರಫ್ತಾಗುವ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಿರುವುದೇ ರಫ್ತು ಇಳಿಕೆಗೆ ಕಾರಣ ಎಂದು ತಿಳಿಸಿದೆ. ‌

ದೇಶದ ಆಮದು ಶೇ 16.63ರಷ್ಟು ಏರಿಕೆಯಾಗಿದ್ದು, ₹6.73 ಲಕ್ಷ ಕೋಟಿಯಷ್ಟಾಗಿದೆ. ಚಿನ್ನ, ಬೆಳ್ಳಿ, ಕಚ್ಚಾ ಹತ್ತಿ, ರಸಗೊಬ್ಬರ ಆಮದು ಹೆಚ್ಚಳವಾಯಿತು. ಇದರಿಂದ ದೇಶದ ವ್ಯಾಪಾರ ಕೊರತೆ ಅಂತರವು ₹3.69 ಲಕ್ಷ ಕೋಟಿಯಷ್ಟಾಗಿದೆ ಎಂದು ತಿಳಿಸಿದೆ.

ADVERTISEMENT

ರಫ್ತು ಮೌಲ್ಯಕ್ಕಿಂತ ಆಮದು ಮೌಲ್ಯ ಹೆಚ್ಚಿದ್ದರೆ ಅದನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ವ್ಯಾಪಾರ ಕೊರತೆ ₹2.76 ಲಕ್ಷ ಕೋಟಿಯಷ್ಟಾಗಿತ್ತು. 

ಅಕ್ಟೋಬರ್‌ ತಿಂಗಳಿನಲ್ಲಿ ಚಿನ್ನದ ಆಮದು ಶೇ 200ರಷ್ಟು ಹೆಚ್ಚಳವಾಗಿದ್ದು, ₹1.30 ಲಕ್ಷ ಕೋಟಿಯಷ್ಟಾಗಿದೆ. ಬೆಳ್ಳಿಯ ಆಮದು ಶೇ 528ರಷ್ಟು ಏರಿಕೆಯಾಗಿದ್ದು, ₹24 ಸಾವಿರ ಕೋಟಿಯಾಗಿದೆ. 

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ₹1.67 ಲಕ್ಷ ಕೋಟಿ ಮೌಲ್ಯದಷ್ಟು ಕಚ್ಚಾ ತೈಲ ಆಮದಾಗಿತ್ತು. ಈ ಬಾರಿ ₹1.31 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ಅಕ್ಟೋಬರ್ ಅವಧಿಯಲ್ಲಿ ದೇಶದ ರಫ್ತು ಶೇ 0.63ರಷ್ಟು ಏರಿಕೆಯಾಗಿದ್ದು, ₹22.52 ಲಕ್ಷ ಕೋಟಿಯಷ್ಟಾಗಿದೆ. ಆಮದು ಶೇ 6.37ರಷ್ಟು ಹೆಚ್ಚಳವಾಗಿದ್ದು, ₹39.96 ಲಕ್ಷ ಕೋಟಿಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ. 

ಎಂಜಿನಿಯರಿಂಗ್‌ ಸರಕುಗಳು, ಪೆಟ್ರೋಲಿಯಂ ಉತ್ಪನ್ನಗಳು, ಹರಳು ಮತ್ತು ಆಭರಣಗಳು, ಸಿದ್ಧ ಉಡುಪುಗಳು ಮತ್ತು ಜವಳಿ, ಔಷಧಗಳ ರಫ್ತು ಇಳಿಕೆಯು, ಒಟ್ಟಾರೆ ರಫ್ತು ಇಳಿಕೆಗೆ ಕಾರಣ ಆಗಿವೆ. ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಶೇ 10.5ರಷ್ಟು ಇಳಿಕೆ ಆಗಿದ್ದರೆ, ಎಂಜಿನಿಯರಿಂಗ್ ಸರಕುಗಳ ರಫ್ತು ಶೇ 16.71ರಷ್ಟು ಕಡಿಮೆ ಆಗಿದೆ ಎಂದು ತಿಳಿಸಿದ್ದಾರೆ.

‘ಜಾಗತಿಕ ರಾಜಕೀಯ ಅನಿಶ್ಚಿತತೆಯು, ಪ್ರಮುಖ ಮಾರುಕಟ್ಟೆಗಳಲ್ಲಿ ದೇಶದ ಸರಕುಗಳಿಗೆ ಬೇಡಿಕೆಯಲ್ಲಿ ಮಂದಗತಿ ಆಗಿರುವುದು, ಸರಕುಗಳ ಬೆಲೆಯಲ್ಲಿನ ಏರಿಳಿತದಿಂದ ರಫ್ತು ಇಳಿಕೆ ಆಗಿದೆ’ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಎಸ್.ಸಿ. ರಾಲ್ಹಾನ್‌ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.