ಮುಂಬೈ: ದೇಶದ ಚಿನ್ನದ ಬೇಡಿಕೆ ಜೂನ್ ತ್ರೈಮಾಸಿಕದಲ್ಲಿ ಶೇ 10ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ವರದಿ ಗುರುವಾರ ತಿಳಿಸಿದೆ.
ಕಳೆದ ವರ್ಷದ ಜೂನ್ ತ್ರೈಮಾಸಿಕದಲ್ಲಿ 149.7 ಟನ್ ಚಿನ್ನಕ್ಕೆ ಬೇಡಿಕೆ ಇತ್ತು. ಅದು ಈ ಬಾರಿ 134.9 ಟನ್‌ಗೆ ಇಳಿದಿದೆ. ಹಳದಿ ಲೋಹದ ದರ ಹೆಚ್ಚಳವೇ ಬೇಡಿಕೆ ಕಡಿಮೆ ಆಗಲು ಕಾರಣ ಎಂದು ತಿಳಿಸಿದೆ.
ಮೌಲ್ಯದ ಲೆಕ್ಕದಲ್ಲಿ 2024ರ ಜೂನ್ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆಯು ₹93,850 ಕೋಟಿಯಷ್ಟಿತ್ತು. ಅದು ಈ ಬಾರಿ ₹1,21,800 ಕೋಟಿಯಷ್ಟಾಗಿದ್ದು, ಶೇ 30ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಚಿನ್ನದ ದರ ಹೆಚ್ಚಳವು ಆಭರಣಗಳ ಬೇಡಿಕೆ ಮೇಲೆ ಪರಿಣಾಮ ಬೀರಿದ್ದು, ಬೇಡಿಕೆಯು ಶೇ 17ರಷ್ಟು ಇಳಿದಿದೆ. ಆದರೆ, ಮೌಲ್ಯದ ಲೆಕ್ಕದಲ್ಲಿ ಆಭರಣಗಳಿಗೆ ಬೇಡಿಕೆ ಶೇ 20ರಷ್ಟು ಹೆಚ್ಚಳವಾಗಿದ್ದು, ₹80,150 ಕೋಟಿಯಾಗಿದೆ ಎಂದು ತಿಳಿಸಿದೆ.
‘ಪ್ರಸಕ್ತ ವರ್ಷದ ಜನವರಿಯಿಂದ ಜೂನ್‌ವರೆಗೆ ಚಿನ್ನದ ಒಟ್ಟು ಬೇಡಿಕೆ ಅಂದಾಜು 253 ಟನ್ ಆಗಿದೆ. ಈ ವರ್ಷದ ಕೊನೆಯ ವೇಳೆಗೆ ಬೇಡಿಕೆಯು 600 ಟನ್‌ನಿಂದ 700 ಟನ್ ಆಗುವ ನಿರೀಕ್ಷೆ ಇದೆ. ದರ ಸ್ಥಿರವಾಗಿದ್ದರೆ ಬೇಡಿಕೆ 700 ಟನ್ ದಾಟಬಹುದು’ ಎಂದು ಸಮಿತಿಯ ಭಾರತದ ಸಿಇಒ ಸಚಿನ್ ಜೈನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.