ADVERTISEMENT

Tariff War:ಅಮೆರಿಕದ ಮೇಲೆ ಭಾರತದಿಂದ ಪ್ರತಿಸುಂಕ?

ಪಿಟಿಐ
Published 5 ಜುಲೈ 2025, 23:36 IST
Last Updated 5 ಜುಲೈ 2025, 23:36 IST
   

ನವದೆಹಲಿ: ಭಾರತದಿಂದ ಬರುವ ಆಟೊಮೊಬೈಲ್‌ ಬಿಡಿಭಾಗಗಳಿಗೆ ಅಮೆರಿಕವು ರಕ್ಷಣಾತ್ಮಕ ಕ್ರಮಗಳ ಹೆಸರಿನಲ್ಲಿ ಸುಂಕ ಹೇರಿರುವುದಕ್ಕೆ ಪ್ರತೀಕಾರವಾಗಿ ಅಮರಿಕದ ಸರಕುಗಳ ಮೇಲೆ ತಾನೂ ಸುಂಕ ಹೇರುವ ಪ್ರಸ್ತಾವವನ್ನು ಭಾರತವು ಡಬ್ಲ್ಯುಟಿಒದಲ್ಲಿ ಇರಿಸಿದೆ.

‘ವಿನಾಯಿತಿಗಳನ್ನು ಹಾಗೂ ಇತರ ಬಾಧ್ಯತೆಗಳನ್ನು ಅಮಾನತಿನಲ್ಲಿ ಇರಿಸುವ ಪ್ರಸ್ತಾವಿತ ಕ್ರಮವು ಅಮೆರಿಕದಿಂದ ಬರುವ ಆಯ್ದ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಳದ ರೂಪವನ್ನು ಪಡೆಯಲಿದೆ’ ಎಂದು ಭಾರತದ ಮನವಿ ಆಧರಿಸಿ ಡಬ್ಲ್ಯುಟಿಒ ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಲಾಗಿದೆ.

ಡಬ್ಲ್ಯುಟಿಒದ ಸರಕು ವ್ಯಾಪಾರ ಮಂಡಳಿಗೆ ಭಾರತ ನೀಡಿರುವ ಮಾಹಿತಿಯಲ್ಲಿ, ಅಮೆರಿಕದಿಂದ ಬರುವ ಸರಕುಗಳಿಗೆ ನೀಡಿರುವ ವಿನಾಯಿತಿಗಳನ್ನು ಅಮಾನತಿನಲ್ಲಿ ಇರಿಸುವ ಬಗ್ಗೆ ವಿವರಿಸಲಾಗಿದೆ.

ADVERTISEMENT

ಸುಂಕ ಹೆಚ್ಚಳದ ರೂಪದಲ್ಲಿ ರಕ್ಷಣಾತ್ಮಕ ಕ್ರಮವನ್ನು ಅಮೆರಿಕವು ಮಾರ್ಚ್‌ 26ರಂದು ಅಂಗೀಕರಿಸಿದೆ. ಪ್ರಯಾಣಿಕ ವಾಹನಗಳು ಹಾಗೂ ಲಘು ಟ್ರಕ್ಕುಗಳ ಮೇಲೆ ಮತ್ತು ಕೆಲವು ಆಟೊಮೊಬೈಲ್‌ ಬಿಡಿಭಾಗಗಳ ಮೇಲೆ ಅವುಗಳ ಮೌಲ್ಯದ ಮೇಲೆ ಶೇಕಡ 25ರಷ್ಟು ತೆರಿಗೆ ಹೆಚ್ಚಿಸುವುದು ಈ ಕ್ರಮ.

ಈ ಕ್ರಮವು ಆಟೊಮೊಬೈಲ್‌ ಬಿಡಿಭಾಗಗಳ ಮೇಲೆ ಮೇ 3ರಿಂದ ಜಾರಿಗೆ ಬಂದಿವೆ. ಅನಿರ್ದಿಷ್ಟ ಅವಧಿಯವರೆಗೆ ಇದು ಜಾರಿಯಲ್ಲಿ ಇರಲಿದೆ. ಈ ಕ್ರಮವನ್ನು ಅಮೆರಿಕವು ಡಬ್ಲ್ಯುಟಿಒಗೆ ತಿಳಿಸಿಲ್ಲ. ಅಮೆರಿಕ ತೆಗೆದುಕೊಂಡಿರುವ ಕ್ರಮವು ಗ್ಯಾಟ್‌ ಒಪ್ಪಂದ ಮತ್ತು ಇತರ ಒಪ್ಪಂದಗಳಿಗೆ ಅನುಗುಣವಾಗಿ ಇಲ್ಲ ಎಂದು ಭಾರತ ಹೇಳಿದೆ.

ಅಮೆರಿಕದ ಸುಂಕಗಳ ವಿಚಾರವಾಗಿ ಸಮಾಲೋಚನೆಗೆ ಭಾರತ ಕೋರಿದ್ದರೂ ಅದು ನಡೆದಿಲ್ಲ. ಹೀಗಾಗಿ, ‘ವಿನಾಯಿತಿಗಳನ್ನು ಮತ್ತು ಇತರ ಹೊಣೆಗಾರಿಕೆಗಳನ್ನು ಅಮಾನತಿನಲ್ಲಿ ಇರಿಸುವ ಹಕ್ಕು ಭಾರತಕ್ಕೆ ಇದೆ’ ಎಂದು ಡಬ್ಲ್ಯುಟಿಒ ಅಧಿಸೂಚನೆಯಲ್ಲಿ ಹೇಳಲಾಗಿದೆ.

ವ್ಯಾಪಾರ ಒಪ್ಪಂದವನ್ನು ಬಲಪಡಿಸುವ ಉದ್ದೇಶದೊಂದಿಗೆ ಭಾರತ ಮತ್ತು ಅಮೆರಿಕವು ಮಧ್ಯಂತರ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ. 

‘ಮಾತುಕತೆ ಮೇಲೆ ಪರಿಣಾಮ ಬೀರದು’

ಅಮೆರಿಕದ ಸರಕುಗಳಿಗೆ ಪ್ರತಿಸುಂಕ ವಿಧಿಸುವ ಹಕ್ಕುಗಳನ್ನು ಕಾಯ್ದಿರಿಸಿಕೊಳ್ಳುವ ಭಾರತದ ನಿರ್ಧಾರವು ಅಮೆರಿಕದ ಜೊತೆ ನಡೆಯುತ್ತಿರುವ ವ್ಯಾಪಾರ ಒಪ್ಪಂದದ ಮಾತುಕತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಡಬ್ಲ್ಯುಟಿಒಗೆ ನೀಡಿರುವ ಮಾಹಿತಿಯು ಭಾರತದ ಹಕ್ಕನ್ನು ಕಾಯ್ದಿರಿಸಿಕೊಳ್ಳುವ ದಿಸೆಯಲ್ಲಿ ಇರಿಸಿರುವ ಅಗತ್ಯ ಕ್ರಮ. ಅದು ಈಗ ನಡೆಯುತ್ತಿರುವ ಮಾತುಕತೆಗಳ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತವನ್ನು ಈ ವರ್ಷದ ಸೆಪ್ಟೆಂಬರ್‌ ಅಕ್ಟೋಬರ್‌ ವೇಳೆಗೆ ಸಾಧ್ಯವಾಗಿಸುವ ಉದ್ದೇಶವು ಎರಡೂ ದೇಶಗಳಿಗೆ ಇದೆ. ಮೊದಲ ಹಂತದ ಒಪ್ಪಂದ ಸಾಧ್ಯವಾಗುವುದಕ್ಕೂ ಮೊದಲು ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲು ಎರಡೂ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.