ADVERTISEMENT

ಆರ್ಥಿಕ ಚೇತರಿಕೆಗೆ ‘ಗ್ರಾಮೀಣ’ ಶಕ್ತಿ: ‘ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್’

ಪಿಟಿಐ
Published 28 ಆಗಸ್ಟ್ 2020, 16:22 IST
Last Updated 28 ಆಗಸ್ಟ್ 2020, 16:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಗ್ರಾಮೀಣ ಪ್ರದೇಶಗಳಲ್ಲಿನ ಬೇಡಿಕೆಯು ಅರ್ಥ ವ್ಯವಸ್ಥೆಯ ಚೇತರಿಕೆಗೆ ತನ್ನದೇ ಆದ ಕೊಡುಗೆ ನೀಡಬಹುದು. ಆದರೆ, ಅದು ನಗರ ಪ್ರದೇಶಗಳಲ್ಲಿ ಕಂಡುಬರುವ ಬೇಡಿಕೆಗೆ ಪರ್ಯಾಯ ಅಲ್ಲ ಎಂದು ವರದಿಯೊಂದು ಹೇಳಿದೆ.

ಕೋವಿಡ್–19 ಕಾಯಿಲೆಯ ನಕಾರಾತ್ಮಕ ಪರಿಣಾಮಗಳಿಂದ ಹೊರಬರಲು ಕೈಗಾರಿಕೆ ಮತ್ತು ಸೇವಾ ವಲಯಗಳು ಇನ್ನೂ ಹೆಣಗಾಡುತ್ತಿವೆ. ಈ ಸಂದರ್ಭದಲ್ಲಿ, ಕೃಷಿ ವಲಯವು ಆರ್ಥಿಕ ಚೇತರಿಕೆಗೆ ಇಂಬು ಕೊಡಬಹುದು ಎಂದು ‘ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್’ ಸಿದ್ಧಪಡಿಸಿರುವ ವರದಿ ಹೇಳಿದೆ.

ದ್ವಿಚಕ್ರ ವಾಹನಗಳು ಹಾಗೂ ಟ್ರ್ಯಾಕ್ಟರ್‌ಗಳ ಮಾರಾಟದಲ್ಲಿ ಜೂನ್‌ ತಿಂಗಳಿನಲ್ಲಿ ಹೆಚ್ಚಳ ಕಂಡುಬಂದಿದೆ. ಹೀಗಿದ್ದರೂ, ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ಬೇಡಿಕೆ ಬರುತ್ತಿರುವುದು ದಿನಬಳಕೆಯ ವಸ್ತುಗಳಿಗೆ ಮಾತ್ರ ಎಂಬುದನ್ನು ವರದಿ ಗುರುತಿಸಿದೆ. ‘ದೇಶದಲ್ಲಿನ ಒಟ್ಟು ಉತ್ಪಾದನೆ ಹಾಗೂ ಸೇವೆಗಳ ಮೌಲ್ಯಕ್ಕೆ ಕೃಷಿ ರಂಗದ ಕೊಡುಗೆಯು ಶೇಕಡ 17ರಷ್ಟು ಮಾತ್ರ ಆಗಿರುವ ಕಾರಣ, ಗ್ರಾಮೀಣ ಪ್ರದೇಶಗಳಲ್ಲಿ ಈಗ ಕಂಡುಬಂದಿರುವ ಬೇಡಿಕೆಯು ನಗರ ಪ್ರದೇಶಗಳಲ್ಲಿ ಕಾಣುವ ಬೇಡಿಕೆಗೆ ಪರ್ಯಾಯ ಆಗಲಾರದು’ ಎಂದು ಅದು ಹೇಳಿದೆ.

ADVERTISEMENT

2020–21ನೇ ಸಾಲಿನ ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯು (–)17.03ರಷ್ಟು ಇರಬಹುದು ಎಂದೂ ಅದು ಅಂದಾಜಿಸಿದೆ. ಕೃಷಿ ಕ್ಷೇತ್ರವು ಲಾಕ್‌ಡೌನ್‌ ಅವಧಿಯಲ್ಲಿ ಹಾಗೂ ಲಾಕ್‌ಡೌನ್‌ ತೆರವಾದ ನಂತರದ ಅವಧಿಯಲ್ಲಿ ಯಾವುದೇ ನಕಾರಾತ್ಮಕ ಪರಿಣಾಮಗಳಿಗೆ ಒಳಗಾಗಿಲ್ಲ. ಈ ವಲಯವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2020–21ರಲ್ಲಿ ಶೇಕಡ 3.5ರಷ್ಟು ಬೆಳವಣಿಗೆ ಸಾಧಿಸಬಹುದು ಎಂದು ಅಂದಾಜಿಸಲಾಗಿದೆ.

ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಾಗಿ, ಕೃಷಿಕರು ಬೆಳೆದ ಬೆಳೆಗೆ ಕಡಿಮೆ ಬೆಲೆ ಸಿಗುವ ಸಾಧ್ಯತೆಯೂ ಇದೆ. ಇದರಿಂದಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಆದಾಯದ ಮೇಲೆ ಪರಿಣಾಮ ಉಂಟಾಗಬಹುದು ಎಂದು ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.