ADVERTISEMENT

2038ರಲ್ಲಿ 2ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಭಾರತ: EY ವರದಿ

ಪಿಟಿಐ
Published 28 ಆಗಸ್ಟ್ 2025, 10:26 IST
Last Updated 28 ಆಗಸ್ಟ್ 2025, 10:26 IST
<div class="paragraphs"><p>ಭಾರತದ ಆರ್ಥಿಕತೆ</p></div>

ಭಾರತದ ಆರ್ಥಿಕತೆ

   

(ಐಸ್ಟಾಕ್‌ ಚಿತ್ರ)

ನವದೆಹಲಿ: 2030ರ ಹೊತ್ತಿಗೆ 20.7 ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಖರೀದಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿರುವ ಭಾರತವು, 2038ಕ್ಕೆ 34.2 ಟ್ರಿಲಿಯನ್ ವೃದ್ಧಿಯೊಂದಿಗೆ ಜಗತ್ತಿನಲ್ಲೇ 2ನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರವಾಗಲಿದೆ ಎಂದು ಇವೈ ಎಕಾನಮಿ ವಾಚ್‌ ವರದಿಯಲ್ಲಿ ಹೇಳಿದೆ.

ADVERTISEMENT

ಅಮೆರಿಕ ವಿಧಿಸಿರುವ ಶೇ 50ರಷ್ಟು ಆಮದು ಸುಂಕದ ಪರಿಣಾಮಗಳಿಂದ ಪಾರಾಗುವ ಮಾರ್ಗೋಪಾಯ ಮತ್ತು ಜಿಡಿಪಿ ವೃದ್ಧಿಗೆ ಹತ್ತು ಪ್ರಮುಖ ಅಂಶಗಳ ಸಹಿತ ಈ ವರದಿಯನ್ನು ಪ್ರಕಟಿಸಲಾಗಿದೆ.

‘ಜಗತ್ತಿನ ಐದು ಪ್ರಮುಖ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿ ಭಾರತ ಅತ್ಯಂತ ಕ್ರಿಯಾಶೀಲವಾಗಿ ಮುನ್ನುಗ್ಗುತ್ತಿದೆ. ಹೆಚ್ಚಿನ ಉಳಿತಾಯ ಮತ್ತು ಹೂಡಿಕೆ ದರ, ಪೂರಕ ಜನಸಂಖ್ಯೆ ಮತ್ತು ಸುಸ್ಥಿರ ಆರ್ಥಿಕ ಗುರಿಯೊಂದಿಗೆ ಸದೃಢ ಆರ್ಥಿಕ ತಳಹದಿಯನ್ನು ಭಾರತ ಹೊಂದಿದೆ. ಜಾಗತಿಕ ಮಟ್ಟದಲ್ಲಿ ಸದ್ಯ ಇರುವ ಸುಂಕದ ಒತ್ತಡ, ಮಂದ ಗತಿಯ ವಹಿವಾಟು, ದೇಶೀಯ ಬೇಡಿಕೆಯಲ್ಲಿ ಹೆಚ್ಚಳ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಸಾಮರ್ಥ್ಯಗಳನ್ನು ಭಾರತ ಹೊಂದಿದೆ’ ಎಂದು ಕಂಪನಿ ತನ್ನ ವರದಿಯಲ್ಲಿ ಹೇಳಿದೆ.

2028ರಲ್ಲಿ ಜಗತ್ತಿನ ಮೂರನೇ ಆರ್ಥಿಕ ರಾಷ್ಟ್ರವಾಗಲಿದೆ ಭಾರತ

ಮಾರುಕಟ್ಟೆ ವಿನಿಮಯ (ಅಮೆರಿಕನ್ ಡಾಲರ್‌) ಬದಲಾಗಿ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ಭಾತರವು ತನ್ನ ಆರ್ಥಿಕ ಗಾತ್ರವನ್ನು ಹೆಚ್ಚಿಸಿಕೊಂಡಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಅಂದಾಜಿನ ಪ್ರಕಾರ ಮಾರುಕಟ್ಟೆ ವಿನಿಮಯ ದರದ ಆಧಾರದಲ್ಲಿ ಭಾರತವು ಚೀನಾ ಮತ್ತು ಅಮೆರಿಕದ ಆರ್ಥಿಕತೆಯನ್ನೂ ಮೀರಿಸುವಂತಿದೆ. 2030ರ ನಂತರದಲ್ಲಿ ಭಾರತ ಮತ್ತು ಅಮೆರಿಕ ಸಮಾನ ಜಿಡಿಪಿ ಬೆಳವಣಿಗೆ ಹೊಂದಿವೆ. 2038ರ ಹೊತ್ತಿಗೆ ಭಾರತದ ಆರ್ಥಿಕತೆಯು ಅಮೆರಿಕವನ್ನು ಹಿಂದಿಕ್ಕಲಿದೆ ಎಂದು ಈ ವರದಿ ಅಂದಾಜಿಸಿದೆ. ಮಾರುಕಟ್ಟೆ ವಿನಿಮಯ ದರದ ಆಧಾರದಲ್ಲಿ 2028ರಲ್ಲಿ ಭಾರತವು ಜರ್ಮನಿಯನ್ನು ಹಿಂದಿಕ್ಕೆ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಲಿದೆ ಎಂದು ಈ ವರದಿ ಹೇಳಿದೆ.

‘ಭಾರತವು ಯುವ ಮತ್ತು ಕೌಶಲಭರಿತ ದುಡಿಯುವ ವರ್ಗವನ್ನು ಹೊಂದಿದೆ. ಉಳಿತಾಯ ಮತ್ತು ಹೂಡಿಕೆ ಪ್ರಮಾಣವೂ ಉತ್ತಮವಾಗಿದೆ. ಸಮರ್ಥನೀಯವಾದ ಸಾಲದ ಪ್ರಮಾಣದಿಂದಾಗಿ ಅಸ್ಥಿರತೆಯಿಂದ ಕೂಡಿರುವ ಜಾಗತಿಕ ಆರ್ಥಿಕ ಪರಿಸರದಲ್ಲೂ ಭಾರತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅತ್ಯಾಧುನಿಕ ಮತ್ತು ಕ್ಲಿಷ್ಟಕರ ತಂತ್ರಜ್ಞಾನಗಳ ಅಭಿವೃದ್ಧಿ ಮೂಲಕ ಭಾರತವು ತನ್ನ 2047ರ ವಿಕಸಿತ ಭಾರತ ಗುರಿಯನ್ನು ಶೀಘ್ರದಲ್ಲಿ ತಲುಪಲಿದೆ’ ಎಂದು ಇವೈ ಇಂಡಿಯಾದ ಮುಖ್ಯ ನೀತಿ ಸಲಹೆಗಾರ ಡಿ.ಕೆ. ಶ್ರೀವಾಸ್ತವ ಹೇಳಿದ್ದಾರೆ.

ಅಮೆರಿಕದ ಸುಂಕದಿಂದ ಭಾರತದ ಜಿಡಿಪಿ ಮೇಲೆ ಪರಿಣಾಮ

‘ಭಾರತದ ವಸ್ತುಗಳಿಗೆ ಅಮೆರಿಕ ಹೇರಿರುವ ಸುಂಕ ಬೀರುವ ಪರಿಣಾಮ ಭಿನ್ನವಾಗಿದೆ. ಭಾರತದ ಜಿಡಿಪಿಗೆ ಶೇ 0.9ರಷ್ಟು ಪರಿಣಾಮ ಬೀರುವ ಸಾಧ್ಯತೆಗಳಿವೆ. ಆದರೆ ಅಮೆರಿಕ ಹೊರತುಪಡಿಸಿ ಜಗತ್ತಿನ ಇತರ ರಾಷ್ಟ್ರಗಳಿಗೆ ತನ್ನ ಉತ್ಪನ್ನಗಳನ್ನು ಕಳುಹಿಸುವ ದಾರಿಯನ್ನು ಭಾರತ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿದೆ’ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಸುಸ್ಥಿರ ನೀತಿಗಳಿಂದಾಗಿ ಅಮೆರಿಕದ ಸುಂಕದ ಹೊರೆಯು ಜಿಡಿಪಿ ಮೇಲೆ ಉಂಟುಮಾಡುವ ಪರಿಣಾಮವನ್ನು ಶೇ 0.1ರಷ್ಟು ತಗ್ಗಿಸಬಹುದು. ಹತ್ತು ಮೂಲ ಅಂಶಗಳನ್ನು ತಗ್ಗಿಸುವುದರಿಂದ 2026ರಲ್ಲಿ ಭಾರತ ನಿರೀಕ್ಷಿಸುತ್ತಿರುವ ಶೇ 6.5ರ ಬೆಳವಣಿಗೆಯನ್ನು ತಲುಪಬಹುದು’ ಎಂದಿದ್ದಾರೆ.

ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕವು ಶೇ 50ರಷ್ಟು ಸುಂಕ ವಿಧಿಸಿದ್ದು, ಇದರಿಂದ 48 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಮೌಲ್ಯದ ರಫ್ತು ವಹಿವಾಟಿನ ಮೇಲೆ ಪ್ರಭಾವ ಬೀರಲಿದೆ. 

ಅಮೆರಿಕ ತಲುಪುವ ಭಾರತದ ಸರಕುಗಳಿಗೆ ಹೊಸ ಸುಂಕ ವ್ಯವಸ್ಥೆಯು ಆಗಸ್ಟ್‌ 27 ರಿಂದ ಅನ್ವಯವಾಗಲಿದೆ ಎಂದು ಅಮೆರಿಕದ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಇಲಾಖೆಯು (ಕಸ್ಟಮ್ಸ್‌ ವಿಭಾಗ) ಸೋಮವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಪ್ರತಿ ಸುಂಕವಾಗಿ ಶೇ 25 ರಷ್ಟು ಆಗಸ್ಟ್‌ 1ರಿಂದಲೇ ಜಾರಿಗೆಯಾಗಿದೆ. ಆದಾಗ್ಯೂ, ಹೆಚ್ಚುವರಿಯಾಗಿ ಶೇ 25 ರಷ್ಟು ಸುಂಕವನ್ನು ಮತ್ತೆ ಹೇರಲಾಗಿದೆ. ಪ್ರತಿಸ್ಪರ್ಧಿ ರಾಷ್ಟ್ರಗಳಾದ ವಿಯೆಟ್ನಾಂ, ಬಾಂಗ್ಲಾದೇಶ, ಇಂಡೋನೇಷ್ಯಾ, ಜಪಾನ್‌ ಮತ್ತು ಚೀನಾಗೆ ಅಮೆರಿಕಕ್ಕೆ ಕಡಿಮೆ ಸುಂಕ ವಿಧಿಸುತ್ತಿರುವುದರಿಂದ, ಭಾರತದ ಸ್ಪರ್ಧೆಗೆ ತೊಡಕಾಗಲಿದೆ.  ಜವಳಿ, ಚರ್ಮ, ಆಭರಣ ಉದ್ಯಮಗಳಿಗೆ ಪೆಟ್ಟು ಬೀಳಬಹುದು. ಆದರೆ ಭಾರತದಲ್ಲಿ ತಯಾರಾಗುವ ಔಷಧ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳಿಗೆ ಯಾವುದೇ ಸಂಕ ವಿಧಿಸುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.