ನವದೆಹಲಿ: ಐರೋಪ್ಯ ಒಕ್ಕೂಟ, ಅಮೆರಿಕ, ಚಿಲಿ ಮತ್ತು ಪೆರು ಸೇರಿದಂತೆ ಹಲವು ದೇಶಗಳ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಮಾತುಕತೆ ನಡೆಸುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಶನಿವಾರ ಹೇಳಿದ್ದಾರೆ.
‘ಜಗತ್ತು ಭಾರತದತ್ತ ನೋಡುತ್ತಿದೆ, ಜಗತ್ತಿನ ಹಲವು ಮುಂದುವರಿದ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ನಮ್ಮ ಜೊತೆ ಮಾತುಕತೆ ನಡೆಸುತ್ತಿವೆ’ ಎಂದು ಅವರು ಹೇಳಿದ್ದಾರೆ.
ಸಚಿವರು ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಈ ಮಾತು ಹೇಳಿದ್ದಾರೆ.
ಆಸ್ಟ್ರೇಲಿಯಾ ಜೊತೆ ಮಾತುಕತೆ: ಆರ್ಥಿಕ ಸಂಬಂಧವನ್ನು ಬಲಪಡಿಸುವ ಉದ್ದೇಶದ ಸಮಗ್ರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಇನ್ನೊಂದು ಸುತ್ತಿನ ಮಾತುಕತೆಯನ್ನು ಭಾರತ ಮತ್ತು ಆಸ್ಟ್ರೇಲಿಯಾ ಶನಿವಾರ ಪೂರ್ಣಗೊಳಿಸಿವೆ.
ಎರಡೂ ದೇಶಗಳು 2022ರ ಡಿಸೆಂಬರ್‌ನಲ್ಲಿ ಮಧ್ಯಂತರ ವ್ಯಾಪಾರ ಒಪ್ಪಂದವೊಂದನ್ನು ಜಾರಿಗೆ ತಂದಿವೆ. ಈ ಒಪ್ಪಂದದ ವ್ಯಾಪ್ತಿಯನ್ನು ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ ಸ್ವರೂಪಕ್ಕೆ ಹಿಗ್ಗಿಸುವ ಮಾತುಕತೆ ಈಗ ನಡೆದಿದೆ.
ಸರಕುಗಳು, ಸೇವೆಗಳು, ಡಿಜಿಟಲ್ ವ್ಯಾಪಾರ, ಕಾನೂನಿನ ಅವಕಾಶಗಳು, ಪರಿಸರ, ಕಾರ್ಮಿಕರ ವಿಚಾರ ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಮಾತುಕತೆಯಲ್ಲಿ ಚರ್ಚೆ ಆಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.