ನವದೆಹಲಿ: ದೇಶದಲ್ಲಿ ನಿರುದ್ಯೋಗ ದರವು ಜುಲೈನಲ್ಲಿ ಶೇ 5.2ಕ್ಕೆ ಇಳಿದಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಸೋಮವಾರ ತಿಳಿಸಿದೆ.
ಜೂನ್ ತಿಂಗಳಿನಲ್ಲಿ ಇದು ಶೇ 5.6ರಷ್ಟಿತ್ತು. ಪುರುಷರಲ್ಲಿ ನಿರುದ್ಯೋಗ ಪ್ರಮಾಣವು ಶೇ 5.3ರಷ್ಟಿದ್ದರೆ, ಮಹಿಳೆಯರಲ್ಲಿ ಇದು ಶೇ 5.1ರಷ್ಟು ಇದೆ ಎಂದು ತಿಳಿಸಿದೆ.
ಈ ಪೈಕಿ 15ರಿಂದ 29 ವರ್ಷದೊಳಗಿನವರ ನಿರುದ್ಯೋಗ ಪ್ರಮಾಣವು ಶೇ 15.3ರಿಂದ ಶೇ 14.9ಕ್ಕೆ ತಗ್ಗಿದೆ. ಇದು ನಗರ ಪ‍್ರದೇಶದಲ್ಲಿ ಶೇ 19ರಷ್ಟಿದ್ದರೆ, ಗ್ರಾಮೀಣ ಭಾಗದಲ್ಲಿ ಶೇ 13ರಷ್ಟಿದೆ.
ನಗರ ಪ್ರದೇಶದಲ್ಲಿರುವ ಎಲ್ಲ ವಯೋಮಾನದವರ ನಿರುದ್ಯೋಗ ಪ್ರಮಾಣ ಜೂನ್‌ನಲ್ಲಿ ಶೇ 7.1 ಇತ್ತು. ಇದು ಜುಲೈನಲ್ಲಿ ಶೇ 7.2ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ 4.9ರಿಂದ ಶೇ 4.4ಕ್ಕೆ ಇಳಿದಿದೆ.
ದೇಶದ 89,505 ಮನೆ ಮತ್ತು 3,79,222 ಜನರಿಂದ ಈ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.