
ಪೀಯೂಷ್ ಗೋಯಲ್
ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ 500 ಬಿಲಿಯನ್ ಡಾಲರ್ (ಸರಿಸುಮಾರು ₹45.28 ಲಕ್ಷ ಕೋಟಿ) ಮೌಲ್ಯದ ಸರಕುಗಳನ್ನು ಖರೀದಿಸುವುದು ಭಾರತಕ್ಕೆ ಕಷ್ಟವಾಗದು ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಈ ಮೊತ್ತದ ಸರಕುಗಳ ಖರೀದಿಯು ಭಾರತ–ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಭಾಗವಾಗಿದೆ.
‘ಕಚ್ಚಾ ತೈಲ, ದ್ರವೀಕೃತಕ ನೈಸರ್ಗಿಕ ಅನಿಲ (ಎಲ್‌ಎನ್‌ಜಿ), ದ್ರವೀಕೃಕ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಮಾತ್ರವಲ್ಲದೆ ವೈಮಾನಿಕ ಕ್ಷೇತ್ರವೊಂದಕ್ಕೇ ನಮಗೆ 100 ಬಿಲಿಯನ್ ಡಾಲರ್‌ಗಿಂತ (ಸರಿಸುಮಾರು ₹9 ಲಕ್ಷ ಕೋಟಿ) ಹೆಚ್ಚು ಮೌಲ್ಯದ ಸರಕುಗಳು ಬೇಕು ಎಂಬುದು ನನ್ನ ಅನಿಸಿಕೆ’ ಎಂದು ಗೋಯಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಮೆರಿಕ ಮತ್ತು ಭಾರತ ಶನಿವಾರ ಹೊರಡಿಸಿರುವ ಜಂಟಿ ಹೇಳಿಕೆ ಪ್ರಕಾರ, ಭಾರತವು ಅಮೆರಿಕದಿಂದ ಐದು ವರ್ಷಗಳಲ್ಲಿ 500 ಬಿಲಿಯನ್ ಡಾಲರ್ ಮೌಲ್ಯದ ಇಂಧನ, ವಿಮಾನ ಮತ್ತು ಅದರ ಬಿಡಿಭಾಗಗಳು, ತಂತ್ರಜ್ಞಾನ ಉತ್ಪನ್ನಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಖರೀದಿಸುವ ಬಯಕೆಯನ್ನು ವ್ಯಕ್ತಪಡಿಸಿದೆ.
ಕಾರ್ಮಿಕರ ಶ್ರಮ ಹೆಚ್ಚಿನ ಮಟ್ಟದಲ್ಲಿ ಅಗತ್ಯವಿರುವ ಜವಳಿ, ಚರ್ಮೋದ್ಯಮ ಮತ್ತು ಪಾದರಕ್ಷೆಗಳು, ಕರಕುಶಲ ಉತ್ಪನ್ನಗಳು, ರಾಸಾಯನಿಕಗಳು, ಹವಳಗಳು ಹಾಗೂ ಆಭರಣ ಉದ್ಯಮದಕ್ಕೆ ಭಾರತದ ಸರಕುಗಳ ಮೇಲಿನ ಸುಂಕ ಕಡಿಮೆ ಆಗುತ್ತಿರುವ ಕಾರಣದಿಂದಾಗಿ ಹೆಚ್ಚು ಅನುಕೂಲ ಆಗಲಿದೆ, ಈ ವಲಯದ ಉತ್ಪನ್ನಗಳು ಅಮೆರಿಕದಲ್ಲಿ ಬೇರೆ ಕೆಲವು ದೇಶಗಳ ಇದೇ ಬಗೆಯ ಉತ್ಪನ್ನಗಳಿಗಿಂತ ಕಡಿಮೆ ಬೆಲೆಗೆ ಸಿಗಲಿವೆ.
ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದವು ದೇಶದ ರೈತರ ಹಿತವನ್ನು ಕಾಯಲಿದೆ ಎಂದು ಗೋಯಲ್ ಪುನರುಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.