ನವದೆಹಲಿ: ಆಟೊಮೊಬೈಲ್ ಆಮದು ಮೇಲೆ ಶೇ 25ರಷ್ಟು ಸುಂಕ ವಿಧಿಸುವುದಾಗಿ ಪ್ರಕಟಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವು, ಭಾರತದಲ್ಲಿ ವಾಹನಗಳ ಬಿಡಿಭಾಗ ತಯಾರಿಸುವ ಕಂಪನಿಗಳಿಗೆ ಭಾರಿ ಪೆಟ್ಟು ನೀಡಲಿದೆ ಎಂದು ಕೈಗಾರಿಕಾ ವಲಯದ ತಜ್ಞರು ಹೇಳಿದ್ದಾರೆ.
ಅಮೆರಿಕಕ್ಕೆ ರಫ್ತಾಗುವ ವಾಹನಗಳು ಹಾಗೂ ಎಂಜಿನ್, ಟ್ರಾನ್ಸ್‌ಮಿಷನ್ ಮತ್ತು ಪವರ್‌ಟ್ರೈನ್ ಬಿಡಿಭಾಗಗಳಿಗೆ ಈ ಸುಂಕ ಅನ್ವಯಿಸಲಿದ್ದು, ಏಪ್ರಿಲ್ 2ರಿಂದ ಜಾರಿಗೆ ಬರಲಿದೆ. ಮೆಕ್ಸಿಕೊ, ಜಪಾನ್, ಚೀನಾ ಮತ್ತು ಕೆನಡಾದಿಂದ ಅತಿಹೆಚ್ಚು ಪ್ರಮಾಣದಲ್ಲಿ ಅಮೆರಿಕಕ್ಕೆ ವಾಹನ ಮತ್ತು ಅವುಗಳ ಬಿಡಿಭಾಗಗಳು ರಫ್ತಾಗುತ್ತವೆ.
ಭಾರತದಿಂದ ವಾಹನಗಳ ರಫ್ತು ಪ್ರಮಾಣ ತೀರಾ ಕಡಿಮೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಬಿಡಿಭಾಗಗಳು ರವಾನೆಯಾಗುತ್ತವೆ. ಹಾಗಾಗಿ, ಈ ಉದ್ಯಮವು ಹೆಚ್ಚು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಭಾರತದಿಂದ ಎಂಜಿನ್ ಬಿಡಿಭಾಗಗಳು, ಪವರ್ ಟ್ರೈನ್ಸ್ ಮತ್ತು ಟ್ರಾನ್ಸ್‌ಮಿಷನ್‌ಗಳು ಅತಿಹೆಚ್ಚು ಪ್ರಮಾಣದಲ್ಲಿ ರವಾನೆಯಾಗುತ್ತವೆ ಎಂದು ಕೈಗಾರಿಕಾ ವಲಯದ ತಜ್ಞರು ತಿಳಿಸಿದ್ದಾರೆ.
‘ಟ್ರಂಪ್ ನೀತಿಯು ಉದ್ಯಮದ ಮೇಲೆ ಪರಿಣಾಮ ಬೀರಲಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ತಮ್ಮ ಪಾಲು ಉಳಿಸಿಕೊಳ್ಳುವ ಬಗ್ಗೆ ದೇಶದ ಬಿಡಿಭಾಗ ಪೂರೈಕೆದಾರರು ಯೋಜನೆ ರೂಪಿಸಲಿದ್ದಾರ. ಟ್ರಂಪ್ ನೀತಿಯು ಎಷ್ಟು ಪರಿಣಾಮ ಬೀರಲಿದೆ ಎಂದು ಈಗಲೇ ನಿರ್ಣಯಿಸುವುದು ಸರಿಯಲ್ಲ’ ಎಂದು ಜೆಎಟಿಒ ಡೈನಾಮಿಕ್ಸ್ ಇಂಡಿಯಾದ ಅಧ್ಯಕ್ಷ ರವಿ ಜಿ. ಭಾಟಿಯಾ ಹೇಳಿದ್ದಾರೆ.
ನವದೆಹಲಿ : ಟ್ರಂಪ್ ಸುಂಕ ನೀತಿಯಿಂದಾಗಿ ದೇಶದ ಷೇರುಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ವಾಹನ ಮತ್ತು ಅವುಗಳ ಬಿಡಿಭಾಗ ತಯಾರಿಸುವ ಕಂಪನಿಗಳ ಷೇರಿನ ಮೌಲ್ಯ ಇಳಿಕೆ ಕಂಡಿದೆ. ಟಾಟಾ ಮೋಟರ್ಸ್ ಶೇ 5.50 ಅಶೋಕ್ ಲೇಲ್ಯಾಂಡ್ ಶೇ 2.77 ಐಷರ್ ಮೋಟರ್ಸ್ ಶೇ 0.97 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 0.35 ಹಾಗೂ ಅಪೋಲೊ ಟೈರ್ಸ್ ಷೇರಿನ ಮೌಲ್ಯವು ಶೇ 0.24ರಷ್ಟು ಕುಸಿದಿದೆ. ವಾಹನಗಳ ಬಿಡಿಭಾಗ ತಯಾರಿಸುವ ಕಂಪನಿಗಳಾದ ಸೋನಾ ಬಿಎಲ್‌ಡಬ್ಲ್ಯು ಪ್ರಿಷಿಸನ್ ಫೋರ್ಜಿಂಗ್ಸ್ ಶೇ 5.89 ಸಂವರ್ಧನಾ ಮದರ್‌ಸನ್ ಇಂಟರ್‌ನ್ಯಾಷನಲ್ ಶೇ 2.22 ಭಾರತ್ ಫೋರ್ಜ್ ಶೇ 2.30 ಎಎಸ್‌ಕೆ ಆಟೊಮೋಟಿವ್ ಶೇ 1.83 ಕ್ರಾಫ್ಟ್‌ಮನ್ ಆಟೋಮೇಷನ್ ಶೇ 1.54 ಹಾಗೂ ರಾಮಕೃಷ್ಣ ಫೊರ್ಜಿಂಗ್ಸ್ ಷೇರಿನ ಮೌಲ್ಯದಲ್ಲಿ ಶೇ 0.40ರಷ್ಟು ಇಳಿಕೆಯಾಗಿದೆ.
ಭಾರತದಿಂದ ಅಮೆರಿಕಕ್ಕೆ ದೊಡ್ಡ ಪ್ರಮಾಣದಲ್ಲಿ ಕಾರುಗಳು ರಫ್ತಾಗುವುದಿಲ್ಲ. ಆದರೆ ಟಾಟಾ ಸಮೂಹದ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್‌ಆರ್) ಕಾರುಗಳಷ್ಟೇ ಅಲ್ಲಿಗೆ ರಫ್ತಾಗುತ್ತವೆ. ಆದರೆ ಭಾರತದಿಂದ ಈ ಕಾರುಗಳನ್ನು ರಫ್ತು ಮಾಡುವುದಿಲ್ಲ. ಬ್ರಿಟನ್‌ನಲ್ಲಿರುವ ಜೆಎಲ್‌ಆರ್ ಘಟಕದಿಂದ ತಯಾರಿಸುವ ಕಾರುಗಳನ್ನು ರವಾನೆ ಮಾಡಲಾಗುತ್ತದೆ. 2023–24ರಲ್ಲಿ ಒಟ್ಟು 4 ಲಕ್ಷ ಕಾರುಗಳು ಮಾರಾಟವಾಗಿವೆ. ಸುಂಕ ನೀತಿಯು ಈ ಕಾರುಗಳ ಮೇಲೆ ಪರಿಣಾಮ ಬೀರಲಿದೆ. ಗ್ರಾಹಕರಿಗೂ ಇದರ ಬಿಸಿ ತಟ್ಟಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಟಾಟಾ ಸಮೂಹವು ಅಮೆರಿಕದಲ್ಲಿಯೇ ತಯಾರಿಕಾ ಘಟಕ ಆರಂಭಿಸುವ ಮೂಲಕ ಸುಂಕದ ಹೊರೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಆದರೆ ವಾಹನ ಬಿಡಿಭಾಗಗಳನ್ನು ರಫ್ತು ಮಾಡುವ ಸೋನಾ ಬಿಎಲ್‌ಡಬ್ಲ್ಯು ಪ್ರಿಷಿಸನ್ ಫೋರ್ಜಿಂಗ್ಸ್ ಸಂವರ್ಧನಾ ಮದರ್‌ಸನ್ ಇಂಟರ್‌ನ್ಯಾಷನಲ್ ಮತ್ತು ಭಾರತ್ ಫೋರ್ಜ್ ಕಂಪನಿಗಳಿಗೆ ಟ್ರಂಪ್ ನೀತಿಯು ಹೆಚ್ಚು ಪೆಟ್ಟು ಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸೋನಾ ಕಂಪನಿಯ ಶೇ 43ರಷ್ಟು ಹಾಗೂ ಭಾರತ್ ಫೋರ್ಜ್ ಕಂಪನಿಯ ಶೇ 38ರಷ್ಟು ಆದಾಯವು ಅಮೆರಿಕದ ಮೇಲೆ ನಿಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.