ADVERTISEMENT

ಓಮೈಕ್ರಾನ್‌: ಆರ್ಥಿಕ ಬೆಳವಣಿಗೆ ಬಗ್ಗೆ ಆರ್‌ಬಿಐ ಕಳವಳ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 16:40 IST
Last Updated 22 ಡಿಸೆಂಬರ್ 2021, 16:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾನವ ಸಂಪರ್ಕದ ಅಗತ್ಯ ಹೆಚ್ಚು ಇರುವ ಸೇವಾ ವಲಯದ ಬೆಳವಣಿಗೆಯ ಮೇಲೆ ಕೊರೊನಾ ವೈರಾಣುವಿನ ಓಮೈಕ್ರಾನ್‌ ತಳಿಯು ದುಷ್ಪರಿಣಾಮ ಉಂಟುಮಾಡಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸಮಿತಿಯ ಸಭೆಯು ಈ ತಿಂಗಳ ಆರಂಭದಲ್ಲಿ ನಡೆದಿತ್ತು. ಸಭೆಯ ವಿವರಗಳನ್ನು ಆರ್‌ಬಿಐ ಬುಧವಾರ ಪ್ರಕಟಿಸಿದೆ. ಓಮೈಕ್ರಾನ್‌ ತರಬಹುದಾದ ಅಪಾಯವು ಹಣಕಾಸು ಮಾರುಕಟ್ಟೆಯಲ್ಲಿ ಇನ್ನಷ್ಟು ಅಸ್ಥಿರತೆಗೆ ಕಾರಣವಾಗುತ್ತಿದೆ ಎಂದೂ ದಾಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೂರೈಕೆ ವ್ಯವಸ್ಥೆಯಲ್ಲಿನ ಅಡಚಣೆಗಳು ಈ ವರ್ಷಾಂತ್ಯದ ವೇಳೆಗೆ ಕೊನೆಗೊಳ್ಳಬಹುದು ಎಂದು ಭಾವಿಸಲಾಗಿತ್ತು. ಆದರೆ ಇದು 2022ರಲ್ಲಿಯೂ ಮುಂದುವರಿಯಬಹುದು ಎಂದು ದಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

‘2021–22ನೆಯ ಹಣಕಾಸು ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇಕಡ 9.5ರಷ್ಟು ಬೆಳವಣಿಗೆ ಸಾಧಿಸುವ ಹಾದಿಯಲ್ಲಿ ಇದೆಯಾದರೂ, ಕಳವಳಕ್ಕೆ ಕಾರಣವಾಗುವ ಹಲವು ಅಂಶಗಳು ಇವೆ. ಮಾರುಕಟ್ಟೆಯಲ್ಲಿ ಸಾರ್ವಜನಿಕರಿಂದ ಸೃಷ್ಟಿಯಾಗುವ ಬೇಡಿಕೆಯು ಕೋವಿಡ್‌ ಪೂರ್ವದ ಮಟ್ಟಕ್ಕಿಂತಲೂ ಕಡಿಮೆ ಇದೆ. ಅಂದರೆ, ಹೆಚ್ಚು ಕಾಲ ಬಾಳಿಕೆ ಬರುವಂತಹ ಪುನಶ್ಚೇತನ ಸಾಧಿಸಲು ನಾವು ಕ್ರಮಿಸಬೇಕಾದ ಹಾದಿ ದೀರ್ಘವಾಗಿದೆ ಎಂಬುದನ್ನು ಇದು ಸೂಚಿಸುತ್ತಿದೆ’ ಎಂದು ದಾಸ್ ಅವರು ಹೇಳಿದ್ದಾರೆ.

ADVERTISEMENT

ಖಾಸಗಿ ವಲಯದಿಂದ ಆಗುವ ಬಂಡವಾಳ ವೆಚ್ಚ ಕೂಡ ದೊಡ್ಡ ಮಟ್ಟದಲ್ಲಿ ಇಲ್ಲ. ತಯಾರಿಕಾ ವಲಯದಲ್ಲಿನ ಸಾಮರ್ಥ್ಯ ಬಳಕೆಯು ಜುಲೈ–ಸೆಪ್ಟೆಂಬರ್ ತ್ರೈಮಾಸಿಕದ ಅವಧಿಯಲ್ಲಿ ಶೇಕಡ 68.8ಕ್ಕೆ ಹೆಚ್ಚಳ ಆಗಿದೆ. ಇದು ಏಪ್ರಿಲ್‌–ಜೂನ್ ತ್ರೈಮಾಸಿಕದಲ್ಲಿ ಶೇಕಡ 60ರಷ್ಟು ಇತ್ತು.

ಓಮೈಕ್ರಾನ್‌ ತಳಿಯ ಕಾರಣದಿಂದಾಗಿ ಜಾಗತಿಕವಾಗಿ ಮತ್ತೊಂದು ಅಲೆ ಸೃಷ್ಟಿಯಾದರೆ, ಮಾರುಕಟ್ಟೆಯಲ್ಲಿ ಕಂಡುಬರುತ್ತಿರುವ ಬೇಡಿಕೆಯಲ್ಲಿನ ಚೇತರಿಕೆಯು ಹಳಿ ತಪ್ಪಬಹುದು ಎಂದು ದಾಸ್ ಅವರು ಸಭೆಯನ್ನು ಹೇಳಿದ್ದಾರೆ.‘ಒಟ್ಟಾರೆಯಾಗಿ, ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣಿಗೆ ಹಾಗೂ ಹಣದುಬ್ಬರ ಮೇಲೆ ಓಮೈಕ್ರಾನ್ ತಳಿಯ ಪರಿಣಾಮ ಏನಿರುತ್ತದೆ ಎಂಬುದನ್ನು ಅಂದಾಜು ಮಾಡಲು ಕಾಲ ಇನ್ನೂ ಪಕ್ವವಾಗಿಲ್ಲ’ ಎಂದೂ ದಾಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.