ನವದೆಹಲಿ: 2024–25ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ (ಐಒಬಿ) ನಿವ್ವಳ ಲಾಭದಲ್ಲಿ ಶೇ 30ರಷ್ಟು ಏರಿಕೆಯಾಗಿದೆ.
ಈ ತ್ರೈಮಾಸಿಕದಲ್ಲಿ ₹1,051 ಕೋಟಿ ನಿವ್ವಳ ಲಾಭ ಗಳಿಸಲಾಗಿದೆ. 2023–24ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹808 ಕೋಟಿ ಲಾಭ ಗಳಿಸಿತ್ತು. ವಸೂಲಾಗದ ಸಾಲದ ಪ್ರಮಾಣ ಇಳಿಕೆ ಮತ್ತು ಬಡ್ಡಿ ವರಮಾನ ಹೆಚ್ಚಳದಿಂದಾಗಿ ಲಾಭದ ಪ್ರಮಾಣವು ಏರಿಕೆಯಾಗಿದೆ ಎಂದು ಬ್ಯಾಂಕ್, ಷೇರುಪೇಟೆಗೆ ಶುಕ್ರವಾರ ತಿಳಿಸಿದೆ.
ಒಟ್ಟು ವರಮಾನ ₹9,215 ಕೋಟಿಯಾಗಿದೆ. ಬಡ್ಡಿ ವರಮಾನ ₹7,634 ಕೋಟಿಯಾಗಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣ ಶೇ 3.10ರಿಂದ ಶೇ 2.14ಕ್ಕೆ ಇಳಿದಿದೆ. ನಿವ್ವಳ ಎನ್‌ಪಿಎ ಶೇ 0.57ರಿಂದ ಶೇ 0.37ಕ್ಕೆ ತಗ್ಗಿದೆ. ಬ್ಯಾಂಕ್‌ನ ಸಮರ್ಪಕ ಬಂಡವಾಳ ಅನುಪಾತವು (ಸಿಎಆರ್) ಶೇ 19.74ರಷ್ಟು ಆಗಿದೆ.
2024–25ನೇ ಪೂರ್ಣ ಆರ್ಥಿಕ ವರ್ಷದ ನಿವ್ವಳ ಲಾಭದಲ್ಲಿ ಶೇ 26ರಷ್ಟು ಏರಿಕೆಯಾಗಿದೆ. ಒಟ್ಟು ₹3,335 ಕೋಟಿ ಆಗಿದೆ. ಒಟ್ಟು ವರಮಾನ ₹33,676 ಕೋಟಿಯಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.