ADVERTISEMENT

ದೇಶದ ಆರ್ಥಿಕ ಬೆಳವಣಿಗೆ ದುರ್ಬಲವಾಗಿದೆ: ಹಣಕಾಸು ನೀತಿ ಸಮಿತಿ ಸದಸ್ಯ ಹೇಳಿಕೆ

ಪಿಟಿಐ
Published 27 ಫೆಬ್ರುವರಿ 2023, 4:57 IST
Last Updated 27 ಫೆಬ್ರುವರಿ 2023, 4:57 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಆರ್ಥಿಕ ಬೆಳವಣಿಗೆಯು ಸದ್ಯ ಬಹಳ ದುರ್ಬಲ ಆಗಿರುವಂತೆ ಕಾಣುತ್ತಿದ್ದು, ದುಡಿಯುವ ವರ್ಗದ ಅಗತ್ಯಗಳನ್ನು ಈಡೇರಿಸುವಲ್ಲಿ ದೇಶವು ಹಿಂದೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸದಸ್ಯ ಜಯಂತ್‌ ಆರ್‌. ವರ್ಮ ಹೇಳಿದ್ದಾರೆ.

ಆರ್ಥಿಕ ಬೆಳವಣಿಗೆಯು ತೀರಾ ದುರ್ಬಲ ಆಗಿರುವಂತೆ ಕಾಣುತ್ತಿದೆ. ಹಣಕಾಸು ನೀತಿಯನ್ನು ಬಿಗಿಗೊಳಿಸುತ್ತಿರುವುದು ಬೇಡಿಕೆಯನ್ನು ಕುಗ್ಗಿಸುತ್ತಿದೆ ಎಂದಿದ್ದಾರೆ.

ಇಎಂಐ ಹೆಚ್ಚಾಗುತ್ತಿರುವುದರಿಂದ ಕುಟುಂಬಗಳ ಗಳಿಕೆ ಮತ್ತು ಖರ್ಚಿನ ಮೇಲೆ ಒತ್ತಡ ಉಂಟಾಗುತ್ತಿದೆ. ಹೀಗಾಗಿ ಜನರು ಖರ್ಚು ಮಾಡುವುದರಿಂದ ಹಿಂದೆ ಸರಿಯುವಂತೆ ಆಗುತ್ತಿದೆ. ಜಾಗತಿಕ ವಿದ್ಯಮಾನಗಳು ರಫ್ತು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಬಡ್ಡಿದರವು ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಖಾಸಗಿ ಬಂಡವಾಳ ಹೂಡಿಕೆ ಇನ್ನಷ್ಟು ಕಷ್ಟವಾಗಲಿದೆ. ಸರ್ಕಾರವು ವಿತ್ತೀಯ ಬಲವರ್ಧನೆಯತ್ತ ಗಮನ ಹರಿಸಿದೆ. ಆ ಮೂಲಕ ಆರ್ಥಿಕತೆಗೆ ಬೆಂಬಲ ನೀಡುವುದನ್ನು ಕಡಿಮೆ ಮಾಡಿದೆ. ಈ ಎಲ್ಲಾ ಅಂಶಗಳಿಂದಾಗಿ ಆರ್ಥಿಕ ಬೆಳವಣಿಗೆಯು ನಿರೀಕ್ಷಿತ ಮಟ್ಟಕ್ಕಿಂತಲೂ ಕಡಿಮೆ ಆಗುವ ಆತಂಕ ಎದುರಾಗಿದೆ ಎಂದು ವರ್ಮಾ ಹೇಳಿದ್ದಾರೆ.

ಭಾರತದಲ್ಲಿ 2022–23ರಲ್ಲಿ ಹಣದುಬ್ಬರವು ಗರಿಷ್ಠ ಮಟ್ಟದಲ್ಲಿ ಇರುವ ನಿರೀಕ್ಷೆ ಇದೆ. 2023–24ರಲ್ಲಿ ಗಮನಾರ್ಹ ಇಳಿಕೆ ಕಾಣಲಿದೆ ಎಂದು ತಿಳಿಸಿದ್ದಾರೆ.

ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಹಾಗೂ 2022–23ರ ದ್ವಿತೀಯಾರ್ಧದಲ್ಲಿ ಹಣಕಾಸು ನೀತಿಯನ್ನು ಬಿಗಿಗೊಳಿಸಲು ವಿಳಂಬ ಮಾಡಿದ ಪರಿಣಾಮಗಳಿಂದಾಗಿ ಹಣದುಬ್ಬರವು ಗರಿಷ್ಠ ಮಟ್ಟಕ್ಕೆ ತಲುಪುವಂತಾಯಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.