ADVERTISEMENT

ಆರ್ಥಿಕ ಪುನಶ್ಚೇತನಕ್ಕೆ ಬೇಕಿದೆ ಇನ್ನಷ್ಟು ಕ್ರಮ: ರಾಜನ್

ಪಿಟಿಐ
Published 23 ಜನವರಿ 2022, 16:03 IST
Last Updated 23 ಜನವರಿ 2022, 16:03 IST
ರಘುರಾಂ ರಾಜನ್
ರಘುರಾಂ ರಾಜನ್   

ನವದೆಹಲಿ: ಸಾಂಕ್ರಾಮಿಕದಿಂದಾಗಿ ಏಟು ತಿಂದಿರುವ ದೇಶದ ಅರ್ಥವ್ಯವಸ್ಥೆಯ ಕೆಲವು ವಲಯಗಳು ಮಾತ್ರ ಚೇತರಿಕೆ ಕಾಣುವ, ಇನ್ನು ಕೆಲವು ವಲಯಗಳು ಕುಸಿತ ಕಾಣುವ ಸ್ಥಿತಿ ಉಂಟಾಗುವುದನ್ನು ತಡೆಯಲು ಕೇಂದ್ರ ಸರ್ಕಾರವು ಇನ್ನಷ್ಟು ಕೆಲಸ ಮಾಡಬೇಕಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಮಾಜಿ ಗವರ್ನರ್ ರಘುರಾಂ ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಂತ್ರಜ್ಞಾನ ವಲಯದ ಕಂಪನಿಗಳು ಹಾಗೂ ಬೃಹತ್ ಪ್ರಮಾಣದ ಉದ್ದಿಮೆಗಳು ಬೇಗನೆ ಆರ್ಥಿಕವಾಗಿ ಚೇತರಿಕೆ ಕಾಣುವುದು, ಸಣ್ಣ ಉದ್ದಿಮೆಗಳು ಹಾಗೂ ಕೈಗಾರಿಕೆಗಳು ಆರ್ಥಿಕವಾಗಿ ಸುಧಾರಿಸಿಕೊಳ್ಳುವ ವೇಗವು ಕಡಿಮೆ ಇರುವುದನ್ನು ಇಂಗ್ಲಿಷ್‌ನ ‘ಕೆ’ ಅಕ್ಷರದ ಮಾದರಿಯ ಆರ್ಥಿಕ ಪುನಶ್ಚೇತನ ಎಂದು ಕರೆಯಲಾಗುತ್ತಿದೆ.

‘ದೊಡ್ಡ ಕಂಪನಿಗಳು, ಐ.ಟಿ. ಮತ್ತು ಐ.ಟಿ. ಆಧಾರಿತ ವಲಯಗಳು ಒಳ್ಳೆಯ ಬೆಳವಣಿಗೆ ಕಾಣುತ್ತಿವೆ. ಇದು ಅರ್ಥ ವ್ಯವಸ್ಥೆಯಲ್ಲಿನ ಆಶಾದಾಯಕ ಚಿತ್ರಣ. ಆದರೆ, ನಿರುದ್ಯೋಗ ಇರುವುದು, ಕೊಳ್ಳುವ ಶಕ್ತಿ ಕಡಿಮೆ ಆಗಿರುವುದು, ಅದರಲ್ಲೂ ಮುಖ್ಯವಾಗಿ ಕೆಳ ಮಧ್ಯಮ ವರ್ಗದವರಲ್ಲಿ ಕೊಳ್ಳುವ ಶಕ್ತಿ ಕಡಿಮೆಯಾಗಿರುವುದು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ಆರ್ಥಿಕ ಒತ್ತಡ ಎದುರಿಸುತ್ತಿರುವುದು ಅರ್ಥ ವ್ಯವಸ್ಥೆಯ ಮೇಲಿನ ಕಪ್ಪು ಕಲೆಗಳಂತೆ ಇವೆ’ ಎಂದು ರಾಜನ್ ಹೇಳಿದ್ದಾರೆ.

ADVERTISEMENT

‘ಕೆ ಅಕ್ಷರದ ಮಾದರಿಯ ಆರ್ಥಿಕ ಪುನಶ್ಚೇತನ ಉಂಟಾಗದಂತೆ ನೋಡಿಕೊಳ್ಳಲು ನಾವು ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಅವರು ಹೇಳಿದ್ದಾರೆ. ಸರ್ಕಾರದ ಕೆಲವು ಉದ್ಯಮಗಳು ಸೇರಿದಂತೆ ಇತರ ಆಸ್ತಿಗಳ ಮಾರಾಟ, ಸರ್ಕಾರದ ಹೆಚ್ಚುವರಿ ಜಮೀನು ಮಾರಾಟದ ಮೂಲಕ ಬಜೆಟ್ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.