
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಾರಣದಿಂದಾಗಿ ಭಾರತಕ್ಕೆ ಸೂರ್ಯಕಾಂತಿ ಎಣ್ಣೆ ಹಾಗೂ ರಸಗೊಬ್ಬರ ತಯಾರಿಕೆಯಲ್ಲಿ ಬಳಸುವ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುವಲ್ಲಿ ಸಮಸ್ಯೆ ಸೃಷ್ಟಿಯಾಗಬಹುದು ಎಂದು ಉದ್ಯಮಗಳು ಆತಂಕ ವ್ಯಕ್ತಪಡಿಸಿವೆ.
ಅಲ್ಲದೆ, ಕೃಷಿ ಉತ್ಪನ್ನಗಳನ್ನು ಯುರೋಪ್ ಹಾಗೂ ಪಶ್ಚಿಮ ಏಷ್ಯಾದ ದೇಶಗಳಿಗೆ ರಫ್ತು ಮಾಡುವವರಿಗೆ ಕೂಡ ತೊಂದರೆ ಆಗುತ್ತದೆ ಎಂದು ಅವು ಹೇಳಿವೆ.
ಪಶ್ಚಿಮ ಏಷ್ಯಾ ಮೂಲಕ ಸಾಗುವ ಹಡಗುಗಳಲ್ಲಿ ಸರಕು ರವಾನೆ ಮಾಡುವವರಿಂದ ತುರ್ತು ಬಿಕ್ಕಟ್ಟು ಶುಲ್ಕವನ್ನು ಸಂಗ್ರಹಿಸಲು ಸರಕು ಸಾಗಣೆ ಕಂಪನಿಗಳು ಶುರುಮಾಡಿವೆ. ಇದರಿಂದಾಗಿ ಆಮದು ವೆಚ್ಚ ಹೆಚ್ಚಾಗಿದೆ.
‘ಈಗ ಪಶ್ಚಿಮ ಏಷ್ಯಾ ಭಾಗಕ್ಕೆ ರಫ್ತು ಕೂಡ ಅಮಾನತಿನಲ್ಲಿ ಇದೆ. ಸಂಘರ್ಷ ಮುಂದುವರಿದಿರುವ ಕಾರಣದಿಂದಾಗಿ ಸಮಸ್ಯೆ ಇದೆ. ಸರಕು ಸಾಗಣೆ ಕಂಪನಿಗಳು ಹೆಚ್ಚುವರಿ ವಿಮಾ ಶುಲ್ಕ ವಿಧಿಸಬಹುದು, ಇದರಿಂದಾಗಿ ಆಮದು ವೆಚ್ಚ ಕೂಡ ಜಾಸ್ತಿ ಆಗಬಹುದು’ ಎಂದು ರಸಗೊಬ್ಬರ ಉದ್ಯಮ ಸಂಘಟನೆಯೊಂದರ (ಎಸ್‌ಎಫ್‌ಐಎ) ಅಧ್ಯಕ್ಷ ರಾಜೀವ್ ಚಕ್ರವರ್ತಿ ಹೇಳಿದ್ದಾರೆ.
ಡಿಎಪಿ ಹಾಗೂ ಎಸ್‌ಎಸ್‌ಪಿ ರಸಗೊಬ್ಬರ ತಯಾರಿಕೆಯಲ್ಲಿ ಬಳಕೆಯಾಗುವ ಗಂಧಕ ಮತ್ತು ಗಂಧಕಾಮ್ಲ ಆಮದಿನ ವಿಚಾರವಾಗಿ ಚಕ್ರವರ್ತಿ ಕಳವಳ ವ್ಯಕ್ತಪಡಿಸಿದ್ದಾರೆ. ಜೂನ್‌ನಲ್ಲಿ ಆರಂಭವಾಗುವ ಮುಂಗಾರು ಬಿತ್ತನೆ ಸಂದರ್ಭದಲ್ಲಿ ಈ ರಸಗೊಬ್ಬರಗಳ ಅಗತ್ಯ ಇರುತ್ತದೆ. ಭಾರತ ಆಮದು ಮಾಡಿಕೊಳ್ಳುವ ಗಂಧಕದಲ್ಲಿ ಶೇ 76ರಷ್ಟು ಕತಾರ್, ಯುಎಇ ಮತ್ತು ಒಮಾನ್‌ನಿಂದ ಬರುತ್ತದೆ.
ಅಡುಗೆ ಎಣ್ಣೆಗೆ ಸಮಸ್ಯೆ: ಭಾರತವು ಪ್ರತಿವರ್ಷ ಅಂದಾಜು 1.6 ಕೋಟಿ ಟನ್ ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಸೂರ್ಯಕಾಂತಿ ಎಣ್ಣೆಯ ಪಾಲು ಸರಿಸುಮಾರು ಶೇ 20ರಷ್ಟಿದೆ. ಇದನ್ನು ಮುಖ್ಯವಾಗಿ ರಷ್ಯಾ, ಉಕ್ರೇನ್ ಮತ್ತು ಅರ್ಜೆಂಟಿನಾದಿಂದ ತರಿಸಲಾಗುತ್ತದೆ. ಹಡಗುಗಳು ಕೆಂಪು ಸಮುದ್ರದ ಮೂಲಕ ಬರಲು ಅವಕಾಶ ಆಗದೆ ಇದ್ದಲ್ಲಿ, ಸಾಗಣೆ ವಿಳಂಬವಾಗುತ್ತದೆ.
‘ಇದುವರೆಗೆ ಸಮಸ್ಯೆ ಆಗಿಲ್ಲ. ಆದರೆ ಬಿಕ್ಕಟ್ಟು ಮುಂದುವರಿದರೆ ಸೂರ್ಯಕಾಂತಿ ಎಣ್ಣೆಯ ಪೂರೈಕೆಗೆ ಅಡಚಣೆ ಎದುರಾಗಬಹುದು. ಏಕೆಂದರೆ ಹಡಗುಗಳು ಸುತ್ತುಬಳಸಿನ ಮಾರ್ಗವನ್ನು ಹಿಡಿಯಬೇಕಾಗುತ್ತದೆ’ ಎಂದು ಭಾರತೀಯ ಎಣ್ಣೆ ಗಿರಣಿಗಳ ಮಾಲೀಕರ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ. ಮೆಹ್ತಾ ಹೇಳಿದ್ದಾರೆ.
ಭಾರತದಿಂದ ರಫ್ತಾಗುವ ಖಾದ್ಯ ತೈಲದಲ್ಲಿ ಶೇ 20ರಷ್ಟು ಪಶ್ಚಿಮ ಏಷ್ಯಾ ದೇಶಗಳಿಗೆ ಹಾಗೂ ಶೇ 15ರಷ್ಟು ಪಾಲು ಯುರೋಪಿನ ದೇಶಗಳಿಗೆ ತಲುಪುತ್ತದೆ. ಖಾದ್ಯ ತೈಲ, ಕೃಷಿ ಉತ್ಪನ್ನ, ತೋಟಗಾರಿಕಾ ಬೆಳೆಗಳು ಹಾಗೂ ಪುಷ್ಪಕೃಷಿ ಉತ್ಪನ್ನಗಳ ರಫ್ತಿನ ಮೇಲೆಯೂ ಈ ಸಮರದಿಂದಾಗಿ ದುಷ್ಪರಿಣಾಮ ಆಗಬಹುದು ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.