
ನವದೆಹಲಿ: ನವೆಂಬರ್‌ನಲ್ಲಿ ದೇಶದ ರಫ್ತು ಪ್ರಮಾಣವು ಪುಟಿದೆದ್ದಿದ್ದು, ಶೇಕಡ 19.37ರಷ್ಟು ಏರಿಕೆ ಕಂಡಿದೆ. ಇದು ಆರು ತಿಂಗಳ ಗರಿಷ್ಠ ಮಟ್ಟ. ನವೆಂಬರ್‌ನಲ್ಲಿ ಒಟ್ಟು ₹3.45 ಲಕ್ಷ ಕೋಟಿಯಷ್ಟು ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ.
ನವೆಂಬರ್‌ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಎಂಜಿನಿಯರಿಂಗ್ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗಿವೆ.
ನವೆಂಬರ್‌ನಲ್ಲಿ ಆಮದು ಪ್ರಮಾಣವು ಶೇ 1.88ರಷ್ಟು ಕಡಿಮೆ ಆಗಿದ್ದು ₹5.68 ಲಕ್ಷ ಕೋಟಿಗೆ ತಲುಪಿದೆ. ಚಿನ್ನ, ಕಚ್ಚಾ ತೈಲ, ಕಲ್ಲಿದ್ದಲು ಮತ್ತು ಕಲ್ಲಿದ್ದಲ ಕಿಟ್ಟದ ಆಮದು ಕಡಿಮೆ ಆಗಿದ್ದುದು ಇದಕ್ಕೆ ಕಾರಣ.
ನವೆಂಬರ್‌ನಲ್ಲಿ ರಫ್ತು ಮಾಡಲಾಗಿರುವ ಸರಕುಗಳ ಒಟ್ಟು ಮೌಲ್ಯವು ಮೇ ತಿಂಗಳ ನಂತರದ ಗರಿಷ್ಠವಾಗಿದೆ. ಚಿನ್ನದ ಆಮದು ನವೆಂಬರ್‌ನಲ್ಲಿ ಶೇ 59.15ರಷ್ಟು ಕಡಿಮೆ ಆಗಿದೆ. ಕಚ್ಚಾ ತೈಲದ ಆಮದು ಶೇ 11.27ರಷ್ಟು ತಗ್ಗಿದೆ.
ಆಮದು ಕಡಿಮೆ ಆಗಿರುವ ಕಾರಣದಿಂದಾಗಿ ದೇಶದ ವ್ಯಾಪಾರ ಕೊರತೆ ಅಂತರವು ಕೂಡ ನವೆಂಬರ್‌ನಲ್ಲಿ ಕಡಿಮೆ ಆಗಿದೆ.
ಅಮೆರಿಕವು ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಿದ್ದರೂ ರಫ್ತು ಪ್ರಮಾಣ ಹೆಚ್ಚಾಗಿದೆ. ‘ಎಲೆಕ್ಟ್ರಾನಿಕ್ಸ್, ಎಂಜಿನಿಯರಿಂಗ್, ರಾಸಾಯನಿಕಗಳು, ಮುತ್ತು ಮತ್ತು ಆಭರಣಗಳ ರಫ್ತು ಹೆಚ್ಚಾಗಿದ್ದುದು ಒಟ್ಟು ರಫ್ತಿನ ಪ್ರಮಾಣ ಏರಿಕೆ ಕಾಣಲು ನೆರವಾಗಿದೆ’ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಹೇಳಿದ್ದಾರೆ.
ಏಪ್ರಿಲ್‌ನಿಂದ ನವೆಂಬರ್‌ವರೆಗಿನ ಅವಧಿಯಲ್ಲಿ ಭಾರತದ ಸರಕುಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗಿರುವ ದೇಶಗಳ ಸಾಲಿನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಇದೆ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಎಸ್.ಸಿ. ರಲ್ಹಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.