ADVERTISEMENT

ಭಾರತದ ವರ್ಚಸ್ಸಿಗೆ ಧಕ್ಕೆ ಇಲ್ಲ: ಸಚಿವೆ ನಿರ್ಮಲಾ ಹೇಳಿಕೆ

ಅದಾನಿ ಎಂಟರ್‌ಪ್ರೈಸಸ್ ಎಫ್‌ಪಿಒ ರದ್ದು: ಸಚಿವೆ ನಿರ್ಮಲಾ ಹೇಳಿಕೆ

ಏಜೆನ್ಸೀಸ್
Published 4 ಫೆಬ್ರುವರಿ 2023, 19:31 IST
Last Updated 4 ಫೆಬ್ರುವರಿ 2023, 19:31 IST
   

ಮುಂಬೈ : ಅದಾನಿ ಸಮೂಹವು ₹20 ಸಾವಿರ ಕೋಟಿ ಮೊತ್ತದ ಎಫ್‌ಪಿಒ ರದ್ದು ಮಾಡಿರುವುದರಿಂದ ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಹೇಳಿದ್ದಾರೆ.

ಎಫ್‌ಪಿಒಗಳು ಬರುವುದು, ವಿದೇಶಿ ಸಾಂಸ್ಥಿಕ ಹೂಡಿಕೆ ಹೊರಹೋಗುವುದು ಸಹಜ. ಈ ಬೆಳವಣಿಗೆಗಳಿಂದ ನಮ್ಮ ಆರ್ಥಿಕ ತಳಹದಿ ಅಥವಾ ಅರ್ಥಿಕತೆಯ ವರ್ಚಸ್ಸಿಗೆ ಯಾವುದೇ ಹಾನಿ ಆಗಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರತಿಯೊಂದು ಮಾರುಕಟ್ಟೆಯಲ್ಲಿಯೂ ಏರಿಳಿತ ಇದ್ದೇ ಇರುತ್ತದೆ. ಕಳೆದ ಎರಡು ದಿನಗಳಲ್ಲಿಯೇ ₹65,600 ಕೋಟಿ ವಿದೇಶಿ ವಿನಿಮಯ ಬಂದಿದೆ. ಇದನ್ನು ಗಮನಿಸಿದರೆ ಭಾರತ ಮತ್ತು ಅದರ ಮೂಲಸ್ವರೂಪದ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ADVERTISEMENT

ಅದಾನಿ ಸಮೂಹದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಮೂಹದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಸಂಸ್ಥೆಗಳು ತಮ್ಮದೇ ಆದ ಕ್ರಮ ಕೈಗೊಳ್ಳಲಿವೆ ಎಂದಿದ್ದಾರೆ.

ಅತ್ಯಂತ ದೊಡ್ಡ ಹಗರಣ; ಜಿಗ್ನೇಶ್‌ (ಅಹಮದಾಬಾದ್‌ ವರದಿ): ‘ದೇಶದ ಕಾರ್ಪೊರೇಟ್‌ ಇತಿಹಾಸದ ಅತ್ಯಂತ ದೊಡ್ಡ ಹಗರಣವನ್ನು ಹಿಂಡನ್‌ಬರ್ಗ್‌ ಬಯಲಿಗೆಳೆದಿದೆ’ ಎಂದು ಗುಜರಾತ್‌ ಕಾಂಗ್ರೆಸ್‌ ಶಾಸಕ ಜಿಗ್ನೇಶ್‌ ಮೆವಾನಿ ಹೇಳಿದರು.

ಅದಾನಿ ಸಮೂಹದ ವಿರುದ್ಧ ಕೂಡಲೇ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಸೋಮವಾರ ಪ್ರತಿಭಟನೆ ನಡೆಸುವುದಾಗಿ ಗುಜರಾತ್‌ ಕಾಂಗ್ರೆಸ್‌ ಶನಿವಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.