ADVERTISEMENT

ತಯಾರಿಕಾ ವಲಯದ ಚಟುವಟಿಕೆ 5 ತಿಂಗಳ ಕನಿಷ್ಠ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2023, 14:08 IST
Last Updated 3 ಅಕ್ಟೋಬರ್ 2023, 14:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆಗಳು ಸೆಪ್ಟೆಂಬರ್‌ನಲ್ಲಿ 5 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಆಗಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆಯು ಮಂಗಳವಾರ ಹೇಳಿದೆ.

ತಯಾರಿಕಾ ವಲಯದ ಬೆಳವಣಿಗೆಯನ್ನು ಸೂಚಿಸುವ ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಆಗಸ್ಟ್‌ನಲ್ಲಿ 58.06ರಷ್ಟು ಇದ್ದಿದ್ದು ಸೆಪ್ಟೆಂಬರ್‌ನಲ್ಲಿ 57.5ಕ್ಕೆ ಇಳಿಕೆ ಆಗಿದೆ. 5 ತಿಂಗಳ ಕನಿಷ್ಠ ಮಟ್ಟ ಇದಾಗಿದೆ.

ಹೊಸ ವಹಿವಾಟುಗಳಿಗೆ ಬೇಡಿಕೆಯು ನಿಧಾನಗತಿಯಲ್ಲಿ ಹೆಚ್ಚಳ ಆಗಿರುವುದು ತಯಾರಿಕಾ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅದು ತಿಳಿಸಿದೆ. ಹೀಗಿದ್ದರೂ, ವಲಯದ ಚಟುವಟಿಕೆಯು ಸತತ 27ನೇ ತಿಂಗಳಿನಲ್ಲಿಯೂ  ಸಕಾರಾತ್ಮಕ ಮಟ್ಟದಲ್ಲಿಯೇ ಇದೆ. ಸೂಚ್ಯಂಕವು 50ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಸಕಾರಾತ್ಮಕ ಬೆಳವಣಿಗೆ ಎಂದೂ, 50ಕ್ಕಿಂತಲೂ ಕಡಿಮೆ ಇದ್ದರೆ ನಕಾರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ.

ADVERTISEMENT

‘ಬೇಡಿಕೆ ಮತ್ತು ತಯಾರಿಕೆ ಬೆಳವಣಿಗೆ ಹಾದಿಯಲ್ಲಿಯೇ ಇವೆ. ಭಾರತದ ಕಂಪನಿಗಳಿಗೆ ಏಷ್ಯಾ, ಯುರೋಪ್‌, ಉತ್ತರ ಅಮೆರಿಕ ಮತ್ತು ಮಧ್ಯಪ್ರಾಚ್ಯದಿಂದ ಹೊಸ ವಹಿವಾಟುಗಳು ಸಿಗುತ್ತಿವೆ’ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್ ಮಾರ್ಕೆಟ್‌ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ತಿಳಿಸಿದ್ದಾರೆ.

‘ಮುಂಬರುವ 12 ತಿಂಗಳುಗಳಲ್ಲಿ ತಯಾರಿಕೆಯು ಹೆಚ್ಚಾಗುವ ವಿಶ್ವಾಸವನ್ನು ಕಂಪ‍ನಿಗಳು ಹೊಂದಿವೆ. ಮುನ್ನೋಟ ಉತ್ತಮವಾಗಿರುವ ನಿರೀಕ್ಷೆಯು ಉದ್ಯೋಗ ಸೃಷ್ಟಿಗೆ ಮತ್ತು ದಾಸ್ತಾನು ಹೆಚ್ಚಿಸಿಕೊಳ್ಳಲು ಕಾರಣವಾಗಲಿದೆ’ ಎಂದು ಲಿಮಾ ಹೇಳಿದ್ದಾರೆ.

ಪೂರೈಕೆ ವ್ಯವಸ್ಥೆಯು ಬಹುತೇಕ ಸ್ಥಿರವಾಗಿದೆ. ಹೀಗಾಗಿ ತಯಾರಿಕಾ ವೆಚ್ಚವು ಮೂರು ವರ್ಷಗಳಲ್ಲಿ ಅವಧಿಯಲ್ಲಿ ವಾರವೊಂದರ ಕನಿಷ್ಠ ಮಟ್ಟಕ್ಕೆ ಇಳಿಕೆ ಆಗುವಂತೆ ಮಾಡಿದೆ ಎಂದು ಸಂಸ್ಥೆಯು ಹೇಳಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಬುಧವಾರದಿಂದ ಶುಕ್ರವಾರದವರೆಗೆ ದ್ವೈಮಾಸಿಕ ಹಣಕಾಸು ನೀತಿ ಸಭೆ ನಡೆಸಲಿದೆ. ತಜ್ಞರ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಈ ಬಾರಿಯ ದ್ವೈಮಾಸಿಕ ಹಣಕಾಸು ನೀತಿ ಸಭೆಯಲ್ಲಿ ಬಡ್ಡಿದರವನ್ನು ಶೇ 6.5ರಲ್ಲಿಯೇ ಉಳಿಸಿಕೊಳ್ಳಲಿದೆ.

ತಯಾರಿಕಾ ವಲಯದ ಬೆಳವಣಿಗೆ ಸೂಚ್ಯಂಕ

ಮೇ -58.7

ಜೂನ್‌- 57.8

ಜುಲೈ -57.7

ಆಗಸ್ಟ್‌ - 58.6

ಸೆಪ್ಟೆಂಬರ್‌- 57.5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.