ADVERTISEMENT

ಹಬ್ಬದ ಬೇಡಿಕೆ: ಅಕ್ಟೋಬರ್‌ನಲ್ಲಿ 123 ಟನ್‌ ಚಿನ್ನವನ್ನು ಆಮದು ಮಾಡಿಕೊಂಡ ಭಾರತ

ಕಳೆದ ವರ್ಷದ ಅಕ್ಟೋಬರ್‌ನಲ್ಲಿ 73 ಟನ್‌ನಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು

ರಾಯಿಟರ್ಸ್‌
Published 20 ನವೆಂಬರ್ 2023, 12:47 IST
Last Updated 20 ನವೆಂಬರ್ 2023, 12:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಹಬ್ಬದ ಋತುವಿನಲ್ಲಿ ಚಿನ್ನಾಭರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಭಾರತವು ಅಕ್ಟೋಬರ್‌ ತಿಂಗಳಿನಲ್ಲಿ 123 ಟನ್‌ನಷ್ಟು ಚಿನ್ನವನ್ನು ಆಮದು ಮಾಡಿಕೊಂಡಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ 73 ಟನ್‌ನಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಆಮದು ಶೇ 60ರಷ್ಟು ಏರಿಕೆ ಕಂಡಿದ್ದು,  31 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. 

ಹಬ್ಬಕ್ಕೂ ಮುನ್ನ ಚಿನ್ನದ ಬೆಲೆ ತುಸು ಇಳಿಕೆ ಕಂಡಿದ್ದು ಸಹ ಚಿನ್ನಾಭರಣ ಖರೀದಿಯನ್ನು ಹೆಚ್ಚಿಸುವಂತೆ ಮಾಡಿತು ಎಂದೂ ತಿಳಿಸಿವೆ.  ಚಿನ್ನದ ಆಮದು ಹೆಚ್ಚಾದರೆ ವ್ಯಾಪಾರ ಕೊರತೆ ಏರಿಕೆ ಆಗುತ್ತದೆ. ರೂಪಾಯಿ ಮೇಲೆಯೂ ಒತ್ತಡ ಹೆಚ್ಚಾಗುತ್ತದೆ ಎಂದೂ ಹೇಳಿವೆ. ಅಕ್ಟೋಬರ್ ತಿಂಗಳ ಆರಂಭದಲ್ಲಿ ಚಿನ್ನದ ಸ್ಥಳೀಯ ದರವು 7 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡವು. ಇದು ಹಬ್ಬದ ಖರೀದಿಯನ್ನು ಹೆಚ್ಚಾಗುವಂತೆ ಮಾಡಿತು ಎಂದು ಮುಂಬೈನ ಚಿನ್ನಾಭರಣ ವಿತರಕರೊಬ್ಬರು ಹೇಳಿದ್ದಾರೆ. 

ಭಾರತೀಯರು ದಸರಾ ಮತ್ತು ದೀಪಾವಳಿಗೆ ಚಿನ್ನ ಖರೀದಿಸುವುದನ್ನು ಶುಭ ಎಂದು ಭಾವಿಸುತ್ತಾರೆ. ಹೀಗಾಗಿ ಈ ಹಬ್ಬಗಳು ಬರುವ ತಿಂಗಳಿನಲ್ಲಿ ಚಿನ್ನದ ಮಾರಾಟದಲ್ಲಿ ಏರಿಕೆ ಕಂಡುಬರುತ್ತದೆ.

ADVERTISEMENT

ದೀಪಾವಳಿಯಲ್ಲಿ ಚಿನ್ನಕ್ಕೆ ಉತ್ತಮ ಬೇಡಿಕೆ ಬಂದಿತ್ತು ಎಂದು ಮುಂಬೈನ ಪಿ.ಎನ್‌. ಗಾಡ್ಗೀಳ್‌ ಆ್ಯಂಡ್‌ ಸನ್ಸ್‌ನ ಸಿಇಒ ಅಮಿತ್ ಮೋದಕ್‌ ಹೇಳಿದ್ದಾರೆ.

ನವೆಂಬರ್‌ನಲ್ಲಿ ತಗ್ಗುವ ನಿರೀಕ್ಷೆ: ನವೆಂಬರ್‌ನಲ್ಲಿ ಚಿನ್ನದ ಆಮದು 80 ಟನ್‌ಗೆ ಇಳಿಕೆ ಆಗುವ ನಿರೀಕ್ಷೆ ಇದೆ. ಆದರೆ, ಕಳೆದ ವರ್ಷದ ನವೆಂಬರ್‌ನಲ್ಲಿ ಆಮದಾಗಿದ್ದ ಪ್ರಮಾಣಕ್ಕೆ ಹೋಲಿಸಿದರೆ (67 ಟನ್‌) ಹೆಚ್ಚಿನ ಮಟ್ಟದಲ್ಲಿಯೇ ಇರಲಿದೆ. ಮದುವೆ ಸಮಾರಂಭಗಳಿಗೆ ಚಿನ್ನದ ಖರೀದಿ ಭರಾಟೆ ಜೋರಾಗಿದೆ ಎಂದು ವಿತರಕರು ಹೇಳಿದ್ದಾರೆ.

ಚಿನ್ನ ಆಮದು

2022ರ ಅಕ್ಟೋಬರ್‌ ₹30,710 ಕೋಟಿ

2023ರ ಅಕ್ಟೋಬರ್‌ ₹60,009 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.