ADVERTISEMENT

ಕಚ್ಚಾ ತೈಲ ದರ ಏರಿಕೆ ಪರಿಣಾಮ: ಹೆಚ್ಚಲಿದೆ ಭಾರತದ ಆಮದು ವೆಚ್ಚ

ಪಿಟಿಐ
Published 27 ಫೆಬ್ರುವರಿ 2022, 11:24 IST
Last Updated 27 ಫೆಬ್ರುವರಿ 2022, 11:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಏಳು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇದರಿಂದಾಗಿ,ಭಾರತವು ಕಚ್ಚಾ ತೈಲ ಆಮದಿಗೆ ಮಾಡುವ ವೆಚ್ಚವು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಪ್ರಸ್ತಕ ಹಣಕಾಸು ವರ್ಷದಲ್ಲಿ ಬಹುತೇಕ ಎರಡು ಪಟ್ಟು ಹೆಚ್ಚಾಗಲಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ‘ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಘಟಕ’ (ಪಿಪಿಎಸಿ) ಹೇಳಿದೆ.

2020–21ನೇ ಹಣಕಾಸು ವರ್ಷದಲ್ಲಿ ಕಚ್ಚಾ ತೈಲ ಆಮದು ವೆಚ್ಚವು ₹ 4.66 ಲಕ್ಷ ಕೋಟಿಗಳಷ್ಟು ಆಗಿತ್ತು. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ (2021–22) ₹ 8.25 ಲಕ್ಷ ಕೋಟಿಗಳಿಂದ ₹ 8.62 ಲಕ್ಷ ಕೋಟಿಗಳಷ್ಟು ಆಗಲಿದೆ ಎಂದು ತಿಳಿಸಿದೆ. 2020-21ನೇ ಹಣಕಾಸು ವರ್ಷದಲ್ಲಿ ಕೋವಿಡ್‌ ಸಾಂಕ್ರಾಮಿಕದ ಕಾರಣಕ್ಕಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರವು ಹೆಚ್ಚಿನ ಏರಿಕೆ ಕಂಡಿರಲಿಲ್ಲ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ 17.59 ಕೋಟಿ ಟನ್‌ಗಳಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗಿದೆ. ಪ್ರಸಕ್ತ ಹಣಕಾಸು ವರ್ಷದ 10 ತಿಂಗಳಿನಲ್ಲಿ (ಏಪ್ರಿಲ್‌–ಜನವರಿ) ಆಮದಿಗೆ ₹ 7.07 ಲಕ್ಷ ಕೋಟಿಗಳಷ್ಟು ವೆಚ್ಚ ಮಾಡಲಾಗಿದೆ. ಜನವರಿ ತಿಂಗಳಿನಲ್ಲಿ ಕಚ್ಚಾ ತೈಲ ದರ ಏರಿಕೆ ಆಗಲು ಆರಂಭವಾದಾಗ ₹ 87 ಸಾವಿರ ಕೋಟಿ ವೆಚ್ಚ ಮಾಡಲಾಗಿತ್ತು. ಇದು ಕಳೆದ ವರ್ಷದ ಜನವರಿಯಲ್ಲಿ ₹ 57,750 ಕೋಟಿ ವೆಚ್ಚ ಆಗಿತ್ತು.

ADVERTISEMENT

ಭಾರತವು ತನ್ನ ದೇಶಿ ಬೇಡಿಕೆಯ ಶೇ 85ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಫೆಬ್ರುವರಿ 24ರಂದು ಬ್ರೆಂಟ್ ಕಚ್ಚಾ ತೈಲ ದರವು ಬ್ಯಾರಲ್‌ಗೆ 105.58 ಡಾಲರ್‌ಗಳಿಗೆ ತಲುಪಿತು. ಐರೋಪ್ಯ ಒಕ್ಕೂಟವು ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ಹೇರಿದ ಬಳಿಕ ತೈಲ ದರವು ಬ್ಯಾರಲ್‌ಗೆ 100 ಡಾಲರ್‌ಗಳಿಂದ ಕೆಳಕ್ಕೆ ಇಳಿಕೆ ಆಯಿತು.

2021–22ರ ಏಪ್ರಿಲ್‌–ಜನವರಿ ಅವಧಿಯಲ್ಲಿ ₹ 1.49 ಲಕ್ಷ ಕೋಟಿ ಮೌಲ್ಯದ 3.36 ಕೋಟಿ ಟನ್‌ಗಳಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಉತ್ಪಾದನೆ ಇಳಿಕೆ: ದೇಶದಲ್ಲಿ ಕಚ್ಚಾ ತೈಲ ಉತ್ಪಾದನೆಯು ಇಳಿಮುಖವಾಗಿದೆ. 2019–20ರಲ್ಲಿ 3.05 ಕೋಟಿ ಟನ್‌ಗಳಷ್ಟು ಉತ್ಪಾದನೆ ಆಗಿತ್ತು. 2020–21ರಲ್ಲಿ 2.91 ಲಕ್ಷ ಕೋಟಿಗಳಿಗೆ ಇಳಿಕೆ ಆಗಿದೆ. ಪ್ರಸಕ್ತ ಹಣಕಾಸು ವರ್ಷದ 10 ತಿಂಗಳಿನಲ್ಲಿ 2.44 ಕೋಟಿ ಟನ್‌ಗಳಷ್ಟು ಉತ್ಪಾದನೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.