ADVERTISEMENT

ಕೈಗಾರಿಕಾ ಉತ್ಪಾದನೆ 9 ತಿಂಗಳ ಕನಿಷ್ಠ

ಪಿಟಿಐ
Published 30 ಜೂನ್ 2025, 14:16 IST
Last Updated 30 ಜೂನ್ 2025, 14:16 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ ಪ್ರಮಾಣವು ಮೇ ತಿಂಗಳಲ್ಲಿ ಶೇಕಡ 1.2ಕ್ಕೆ ಇಳಿಕೆ ಆಗಿದೆ. ಇದು ಒಂಬತ್ತು ತಿಂಗಳ ಕನಿಷ್ಠ ಮಟ್ಟ.

ಮುಂಗಾರು ಮಳೆಯು ವಾಡಿಕೆಗಿಂತ ಮೊದಲೇ ಆರಂಭವಾಗಿ ತಯಾರಿಕೆ, ಗಣಿಗಾರಿಕೆ ಮತ್ತು ಇಂಧನ ಕ್ಷೇತ್ರಗಳಲ್ಲಿನ ಬೆಳವಣಿಗೆಯು ಚೆನ್ನಾಗಿ ಆಗಿಲ್ಲದ ಕಾರಣದಿಂದಾಗಿ ಒಟ್ಟಾರೆ ಬೆಳವಣಿಗೆಯು ತಗ್ಗಿದೆ.

ADVERTISEMENT

ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಆಧರಿಸಿ ಹೇಳುವ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ ಪ್ರಮಾಣವು 2024ರ ಮೇ ತಿಂಗಳಲ್ಲಿ ಶೇ 6.3ರಷ್ಟು ಆಗಿತ್ತು.

ಏಪ್ರಿಲ್‌ ತಿಂಗಳ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ ಪ್ರಮಾಣವನ್ನು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಪರಿಷ್ಕರಿಸಿದೆ. ಮೊದಲು ಅದು ಶೇ 2.7ರಷ್ಟು ಇದ್ದಿದ್ದು ಪರಿಷ್ಕರಣೆಯ ನಂತರ ಶೇ 2.6ರಷ್ಟು ಆಗಿದೆ.

ತಯಾರಿಕಾ ವಲಯದ ಬೆಳವಣಿಗೆ ದರವು ಹಿಂದಿನ ವರ್ಷದ ಮೇ ತಿಂಗಳಲ್ಲಿ ಶೇ 5.1ರಷ್ಟು ಇದ್ದಿದ್ದು ಈ ವರ್ಷದ ಮೇ ತಿಂಗಳಲ್ಲಿ ಶೇ 2.6ಕ್ಕೆ ಇಳಿಕೆ ಆಗಿದೆ. ಗಣಿಗಾರಿಕಾ ವಲಯದ ಬೆಳವಣಿಗೆಯು ಕಳೆದ ವರ್ಷದ ಮೇ ತಿಂಗಳಲ್ಲಿ ಶೇ 6.6ರಷ್ಟು ಇದ್ದಿದ್ದು ಈ ಬಾರಿ ಶೇ 6.5ರಷ್ಟಾಗಿದೆ.

ವಿದ್ಯುತ್ ಉತ್ಪಾದನೆಯ ಬೆಳವಣಿಗೆ ಪ್ರಮಾಣವು ಕಳೆದ ವರ್ಷ ಶೇ 13.7ರಷ್ಟು ಇದ್ದಿದ್ದು ಈ ಬಾರಿ ಶೇ 5.8ರಷ್ಟು ಕಡಿಮೆ ಆಗಿದೆ.

‘ಮುಂಗಾರು ಮಳೆಯು ವಾಡಿಕೆಗಿಂತ ಮೊದಲೇ ಶುರುವಾದ ಕಾರಣದಿಂದಾಗಿ ಗಣಿಗಾರಿಕೆ ವಲಯದಲ್ಲಿ ಚಟುವಟಿಕೆ ಕಡಿಮೆ ಆಯಿತು. ಮುಂಗಾರು ಮಳೆಯಿಂದಾಗಿ ವಿದ್ಯುತ್ ಬೇಡಿಕೆ ಕೂಡ ಕಡಿಮೆ ಆಯಿತು. ತಯಾರಿಕಾ ವಲಯದಲ್ಲಿನ ಬೆಳವಣಿಗೆ ಚೆನ್ನಾಗಿ ಇಲ್ಲ’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಯ್ಯರ್ ಹೇಳಿದ್ದಾರೆ.

ಸಾಲ ನೀಡಿಕೆ ಇಳಿಕೆ

ಮುಂಬೈ: ಮೇ 30ಕ್ಕೆ ಕೊನೆಗೊಂಡ ಹದಿನೈದು ದಿನಗಳ ಅವಧಿಯಲ್ಲಿ ಕೈಗಾರಿಕಾ ವಲಯಕ್ಕೆ ನೀಡುವ ಬ್ಯಾಂಕ್‌ ಸಾಲದ ಪ್ರಮಾಣವು ಶೇಕಡ 4.9ರಷ್ಟು ಬೆಳವಣಿಗೆ ಕಂಡಿದೆ. ಆದರೆ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ಬಗೆಯ ಸಾಲಗಳ ಬೆಳವಣಿಗೆ ಪ್ರಮಾಣ ಶೇ 8.9ರಷ್ಟು ಆಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ ಈ ವರ್ಷದಲ್ಲಿ ಸಾಲ ನೀಡಿಕೆ ಪ್ರಮಾಣ ಇಳಿಕೆ ಆಗಿದೆ. ಈ ಅಂಕಿ–ಅಂಶವನ್ನು ಆರ್‌ಬಿಐ ಬಿಡುಗಡೆ ಮಾಡಿದೆ. ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ವಲಯಗಳಿಗೆ ನೀಡುವ ಸಾಲದ ಪ್ರಮಾಣವು ಶೇ 7.5ರಷ್ಟು ಬೆಳವಣಿಗೆ ಸಾಧಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ವಲಯಕ್ಕೆ ನೀಡಿದ ಸಾಲದ ಪ್ರಮಾಣದಲ್ಲಿ ಶೇ 21.6ರಷ್ಟು ಬೆಳವಣಿಗೆ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.