ADVERTISEMENT

ಕಾರ್ಖಾನೆಗಳಲ್ಲಿ ರೊಬೊಗಳ ಅಳವಡಿಕೆ: ಜಾಗತಿಕ ಮಟ್ಟದಲ್ಲಿ 6ನೇ ಸ್ಥಾನಕ್ಕೇರಿದ ಭಾರತ

ಪಿಟಿಐ
Published 26 ಸೆಪ್ಟೆಂಬರ್ 2025, 5:58 IST
Last Updated 26 ಸೆಪ್ಟೆಂಬರ್ 2025, 5:58 IST
<div class="paragraphs"><p>ಕೈಗಾರಿಕೆಗಳಲ್ಲಿ ರೊಬೊ</p></div>

ಕೈಗಾರಿಕೆಗಳಲ್ಲಿ ರೊಬೊ

   

ಐಸ್ಟಾಕ್ ಚಿತ್ರ

ಫ್ರಾಂಕ್‌ಫರ್ಟ್‌: ‘ಕೈಗಾರಿಕಾ ರೊಬೊಗಳ ಮಾರಾಟ ಹೊಸ ದಾಖಲೆ ಸೃಷ್ಟಿಸಿದ್ದು ಭಾರತದಲ್ಲಿ ಒಟ್ಟು 9,120 ಇಂಥ ಬೃಹತ್ ರೊಬೊಗಳನ್ನು ಕಾರ್ಖಾನೆಗಳಲ್ಲಿ ಅಳವಡಿಸಲಾಗಿದೆ. ಇದು ಕಳೆದ ಸಾಲಿಗಿಂತ ಶೇ 7ರಷ್ಟು ಅಧಿಕವಾಗಿದ್ದು, ಈಗ ಭಾರತ ಜಗತ್ತಿನಲ್ಲೇ 6ನೇ ಸ್ಥಾನದಲ್ಲಿದೆ’ ಎಂದು ಅಂತರರಾಷ್ಟ್ರೀಯ ರೊಬೊಟಿಕ್ಸ್‌ ಒಕ್ಕೂಟವು ಇತ್ತೀಚೆಗೆ ಬಿಡುಗಡೆ ಮಾಡಿದ ವಿಶ್ವ ರೊಬೊಟಿಕ್ಸ್‌ 2025 ವರದಿಯಲ್ಲಿ ದಾಖಲಿಸಿದೆ.

ADVERTISEMENT

ಕಾರ್ಖಾನೆಗಳಲ್ಲಿ ರೊಬೊಗಳ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿರುವ ಜರ್ಮನಿ, ಕೊರಿಯಾ, ಅಮೆರಿಕ, ಜಪಾನ್ ಹಾಗೂ ಚೀನಾ ನಂತರದ ಸ್ಥಾನದಲ್ಲಿ ಭಾರತವಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

‘ಸದ್ಯ ಭಾರತವು ಅತ್ಯಂತ ವೇಗವಾಗಿ ಆರ್ಥಿಕತೆ ವೃದ್ಧಿಸಿಕೊಳ್ಳುತ್ತಿರುವ ರಾಷ್ಟ್ರವಾಗಿದೆ. ಕಳೆದ ಎರಡು ವರ್ಷಗಳಿಂದ ರೊಬೊಗಳ ಅಳವಡಿಕೆ ದಾಖಲೆ ಮಟ್ಟದಲ್ಲಿ ಹೆಚ್ಚಿದೆ. ಅದರಲ್ಲೂ ಆಟೊಮೊಬೈಲ್ ಕ್ಷೇತ್ರದಲ್ಲಿ ಇದು ಇನ್ನಷ್ಟು ವೇಗವಾಗಿದೆ’ ಎಂದು ಅಂತರರಾಷ್ಟ್ರೀಯ ರೊಬೊಟಿಕ್ಸ್ ಒಕ್ಕೂಟದ ಅಧ್ಯಕ್ಷ ತಕಾಯುಕಿ ಇಟೊ ತಿಳಿಸಿದ್ದಾರೆ.

‘2024ರಲ್ಲಿ ಶೇ 15ರ ಬೆಳವಣಿಗೆ ದರದೊಂದಿಗೆ 4,070 ರೊಬೊಗಳ ಅಳವಡಿಸಲಾಗಿತ್ತು. ಬಿಡಿಭಾಗಗಳ ಪೂರೈಕೆದಾರರು ಹೂಡಿಕೆಯನ್ನು ಹೆಚ್ಚು ಮಾಡಿದ್ದರಿಂದಾಗಿ 2,100 ರೊಬೊಗಳ (ಶೇ 40) ಅಳವಡಿಸಲಾಗಿದೆ. ಕಾರು ತಯಾರಕರು ಕಡಿಮೆ ಪ್ರಮಾಣದಲ್ಲಿ ರೊಬೊಗಳನ್ನು ಅಳವಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಶೇ 3ರಷ್ಟು ಕುಸಿದಿದೆ. ಆದರೂ ಈ ಕ್ಷೇತ್ರದಲ್ಲಿ ರೊಬೊಗಳ ಪಾಲು ಶೇ 45ರಷ್ಟಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

'ಪ್ಲಾಸ್ಟಿಕ್ ಮತ್ತು ರಾಸಾಯನಿಕ ಉತ್ಪನ್ನಗಳ ತಯಾರಿಕೆಯಲ್ಲಿ 600 ರೊಬೊಗಳನ್ನು ಅಳವಡಿಸಲಾಗಿದೆ. ಈ ಕ್ಷೇತ್ರದಲ್ಲಿ ಶೇ 33ರಷ್ಟು ಹೆಚ್ಚಳವಾಗಿದೆ. ಲೋಹದ ಕ್ಷೇತ್ರದಲ್ಲಿ 420 ರೊಬೊಗಳೊಂದಿಗೆ ಶೇ 30ರಷ್ಟು ಬೆಳವಣಿಗೆ ಕಂಡಿದೆ. ಈ ಎಲ್ಲದರಿಂದ ಭಾರತದಲ್ಲಿ ಯಂತ್ರಗಳ ಬಳಕೆಯಲ್ಲಿ ಭಾರೀ ಹೆಚ್ಚಳವಾಗಿದ್ದು, 2024ರವರೆಗೂ ಒಟ್ಟು ರೊಬೊಗಳ ಸಂಖ್ಯೆ 52,570ಕ್ಕೆ ಹೆಚ್ಚಳವಾಗಿದೆ. ಯಂತ್ರಗಳ ಬಳಕೆಯಲ್ಲಿ ಭಾರತವು ಜಗತ್ತಿನಲ್ಲಿ 10ನೇ ಸ್ಥಾನದಲ್ಲಿದೆ’ ಎಂದು ಈ ವರದಿ ಹೇಳಿದೆ.

‘ಜಗತ್ತಿನಲ್ಲೇ ಅತಿ ಹೆಚ್ಚು ಯಂತ್ರಗಳನ್ನು ಬಳಸುವ ಮುಂಚೂಣಿಯ ಐದು ರಾಷ್ಟ್ರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರೊಬೊಗಳ ಸಂಖ್ಯೆ 3 ಲಕ್ಷದಿಂದ 20 ಲಕ್ಷದವರೆಗೂ ಇದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳಿವೆ. ಭಾರತದ ಜಿಡಿಪಿ ಬೆಳವಣಿಗೆ ವಾರ್ಷಿಕ ಶೇ 6.3ರ ದರದಲ್ಲಿದೆ. 2025ರಿಂದ 2026ರಲ್ಲಿ ಇದು ಗರಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.