ADVERTISEMENT

ಹೊಸ ದಿಕ್ಕಿನತ್ತ ಕರ್ನಾಟಕ ಕೈಗಾರಿಕಾ ಭವಿಷ್ಯ: ಸಚಿವ ಎಂ.ಬಿ. ಪಾಟೀಲ ಸಂದರ್ಶನ

ಚಂದ್ರಹಾಸ ಹಿರೇಮಳಲಿ
Published 7 ಫೆಬ್ರುವರಿ 2025, 23:55 IST
Last Updated 7 ಫೆಬ್ರುವರಿ 2025, 23:55 IST
<div class="paragraphs"><p>ಎಂ.ಬಿ. ಪಾಟೀಲ</p></div>

ಎಂ.ಬಿ. ಪಾಟೀಲ

   

–‍ ಪ್ರಜಾವಾಣಿ ಚಿತ್ರ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರುವರಿ 11ರಿಂದ 14ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ (ಇನ್‌ವೆಸ್ಟ್‌ ಕರ್ನಾಟಕ) ಮೂಲಕ ರಾಜ್ಯ ಸರ್ಕಾರ ₹10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಸೆಳೆಯುವ ಗುರಿ ಇಟ್ಟುಕೊಂಡಿದೆ. ಕೆಲ ತಿಂಗಳಿನಿಂದ ನಿರಂತರವಾಗಿ ಹಲವು ದೇಶಗಳಿಗೆ ಭೇಟಿ ನೀಡಿ, ದೊಡ್ಡ ಮೊತ್ತದ ಬಂಡವಾಳ ಹೂಡಿಕೆಯ ಭರವಸೆ ಪಡೆಯುವಲ್ಲಿ ಕೈಗಾರಿಕಾ ಸಚಿವ ಎಂ‌.ಬಿ.ಪಾಟೀಲ ಯಶಸ್ಸಿಯಾಗಿದ್ದಾರೆ. ಅವರ ಜತೆ ‘ಪ್ರಜಾವಾಣಿ’ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

ADVERTISEMENT

2025ರ ಸಮಾವೇಶ ಹಿಂದಿಗಿಂತ ಹೇಗೆ ಭಿನ್ನ? 

ಬದಲಾದ ಜಾಗತಿಕ ನಿಲುವುಗಳಿಂದ ಜಾಗತಿಕ ಬಂಡವಾಳ ಭಾರತದತ್ತ ಹರಿಯುತ್ತಿದೆ. ಬಂಡವಾಳ ಹೂಡಿಕೆಗೆ ಕರ್ನಾಟಕ ಪ್ರಶಸ್ತ ಸ್ಥಳ ಎನ್ನುವುದನ್ನು ವಿದೇಶದ ಹೆಸರಾಂತ ಕಂಪನಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಹೊಸ ಚಿಂತನೆಯ ನಾಯಕತ್ವ, ಉದ್ಯಮ ಮತ್ತು ರಾಜ್ಯ ಸರ್ಕಾರದ ಮಧ್ಯೆ ಪಾಲುದಾರಿಕೆ ಹೆಚ್ಚಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುವಂತೆ ಸಮಾವೇಶ ವಿನ್ಯಾಸಗೊಳಿಸಲಾಗಿದೆ. ಸಂಶೋಧನೆ, ಸಹಯೋಗಗಳು ಹೆಚ್ಚಲಿವೆ. ತಯಾರಿಕಾ ಚಟುವಟಿಕೆಗಳು ಗಮನಾರ್ಹವಾಗಿ ವಿಸ್ತಾರಗೊಳ್ಳಲಿವೆ. ಸಮಾವೇಶದ ಮುಖ್ಯ ಧ್ಯೇಯ ಪ್ರಗತಿಯ ಮರುಪರಿಕಲ್ಪನೆ’ ತಂತ್ರಜ್ಞಾನ ಆಧಾರಿತ, ಪರಿಸರ ಸ್ನೇಹಿ, ಸುಸ್ಥಿರ ಹಾಗೂ ಸಮತೋಲನದ ಬೆಳವಣಿಗೆ ಉತ್ತೇಜಿಸುವ ರಾಜ್ಯ ಸರ್ಕಾರದ ಬದ್ಧತೆ ಪ್ರತಿಬಿಂಬಿಸಲಿದೆ. ಸಮಾವೇಶದ ನಂತರ ಕರ್ನಾಟಕದ ಭವಿಷ್ಯ ಹೊಸ ದಿಕ್ಕಿನತ್ತ ಸಾಗಲಿದೆ.

ಸಿದ್ಧತೆ ಹೇಗಿದೆ, ಎಷ್ಟು ದೇಶಗಳು ಭಾಗವಹಿಸುತ್ತಿವೆ?

ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮಗ್ರವಾಗಿ ರಾಜ್ಯದ ಕೈಗಾರಿಕಾ ಚಿತ್ರಣ ಬದಲಾಯಿಸಲು ನೆರವಾಗಲಿರುವ ಭೂಮಿಕೆಯಾಗಿ ಸಜ್ಜುಗೊಳಿಸಲಾಗಿದೆ. ಈ ಬಾರಿಯ ಸಮಾವೇಶದಲ್ಲಿ  ಫ್ರಾನ್ಸ್, ನೆದರ್‌ಲೆಂಡ್‌, ಜಪಾನ್, ಥಾಯ್ಲೆಂಡ್‌, ಮಲೇಷ್ಯಾ, ದಕ್ಷಿಣ ಕೊರಿಯಾ, ಇಸ್ರೇಲ್, ನಾರ್ವೆ,  ಸ್ವಿಟ್ಜರ್‌ಲೆಂಡ್, ತೈವಾನ್, ಜರ್ಮನಿ, ಆಸ್ಟ್ರೇಲಿಯಾ, ಡೆನ್ಮಾರ್ಕ್, ಪೋಲಂಡ್, ಇಟಲಿ, ಬ್ರಿಟನ್‌, ಸ್ಲೊವೆನಿಯಾ, ಬಹರೇನ್‌ ಮತ್ತು ಸಿಂಗಪುರ ಸೇರಿ 19 ದೇಶಗಳು ಭಾಗವಹಿಸುತ್ತಿವೆ. ಸಮಾವೇಶದಲ್ಲಿ ಒಂಬತ್ತು ‘ಕಂಟ್ರಿ ಪೆವಿಲಿಯನ್‌’ ಇರಲಿವೆ. 

ಹೂಡಿಕೆದಾರರಿಗೆ ಕರ್ನಾಟಕ ನೆರೆ ರಾಜ್ಯಗಳಿಗಿಂತ ಹೇಗೆ ಭಿನ್ನ?

ಕರ್ನಾಟಕ ಸ್ವಾತಂತ್ರ್ಯ ಪೂರ್ವದಿಂದಲೂ ಕೈಗಾರಿಕಾ ಹಬ್‌ ಆಗಿ ಗುರುತಿಸಿಕೊಂಡಿದೆ. ಮೈಸೂರು ಅರಸರು ಹಲವು ಉದ್ದಿಮೆಗಳಿಗೆ ಅಡಿಪಾಯ ಹಾಕಿದ್ದರು. ಇಸ್ರೊ, ಎಚ್‌ಎಎಲ್‌ ಸೇರಿದಂತೆ ಬಾಹ್ಯಾಕಾಶ, ರಕ್ಷಣಾ ವಲಯದಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ವೈದ್ಯಕೀಯ, ಎಂಜಿನಿಯರಿಂಗ್‌ ಹಬ್‌ ಆಗಿ ಬೆಳೆದಿದೆ. ಬ್ರ್ಯಾಂಡ್‌ ಬೆಂಗಳೂರು, ಸಿಲಿಕಾನ್‌ ಸಿಟಿ ಎಂಬ ಖ್ಯಾತಿ ಗಳಿಸಿದೆ. ಮಾಹಿತಿ ತಂತ್ರಜ್ಞಾನ ವರಮಾನ ಮತ್ತು ರಫ್ತು ವಹಿವಾಟಿನಲ್ಲಿ ಕರ್ನಾಟಕ ದೇಶಕ್ಕೇ ಮೊದಲ ಸ್ಥಾನದಲ್ಲಿದೆ ಈಚೆಗೆ ಕಾಂಗ್ರೆಸ್‌ ಸರ್ಕಾರ ರೂಪಿಸಿದ ಉದ್ಯಮಿ ಸ್ನೇಹಿ ನಿಯಮಗಳು, ನಿಲುವುಗಳಿಂದಾಗಿ ಕರ್ನಾಟಕ ನವೋದ್ಯಮಗಳ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ.

ಮೂಲಸೌಲಭ್ಯಗಳು ಹೇಗಿವೆ?

ಸಂಶೋಧನಾ ಕೇಂದ್ರಗಳು, ಆಧುನಿಕ ವಿಮಾನ ನಿಲ್ದಾಣಗಳು, ಉನ್ನತ ದರ್ಜೆಯ ರಸ್ತೆ ಸಂಪರ್ಕದಂತಹ ಸೌಲಭ್ಯಗಳು, ಪ್ರತಿಭಾನ್ವಿತ ತಂತ್ರಜ್ಞರ ಲಭ್ಯತೆ ಇದೆ. ಆದ್ಯತಾ ವಲಯಗಳ ಕಡೆಗೆ ಹೂಡಿಕೆದಾರರನ್ನು ಆಕರ್ಷಿಸಲು, ವಿಶ್ವ ದರ್ಜೆಯ ಕೈಗಾರಿಕಾ ಮೂಲಸೌಲಭ್ಯಗಳನ್ನು ಒದಗಿಸಲು, ರಾಜ್ಯದ ಕೈಗಾರಿಕಾ ಬೆಳವಣಿಗೆ ದರವನ್ನು ಸುಸ್ಥಿರವಾಗಿ ಉಳಿಸಿಕೊಳ್ಳಲು  ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ.

ಹೂಡಿಕೆಗೆ ಗುರುತಿಸಿರುವ ಆದ್ಯತಾ ವಲಯಗಳು ಯಾವವು?

ವೈಮಾಂತರಿಕ್ಷ ಮತ್ತು ರಕ್ಷಣೆ, ಎಲೆಕ್ಟ್ರಾನಿಕ್‌ ಬಿಡಿಭಾಗಗಳು, ವಿದ್ಯುನ್ಮಾನ ವ್ಯವಸ್ಥೆಯ ವಿನ್ಯಾಸ ಹಾಗೂ ತಯಾರಿಕೆ, ಉಗ್ರಾಣ ಹಾಗೂ ಸರಕು ಸಾಗಣೆ, ವಿದ್ಯುತ್ ಚಾಲಿತ ವಾಹನ, ಜವಳಿ, ಸೆಮಿಕಂಡಕ್ಟರ್‌, ವೈದ್ಯಕೀಯ ತಂತ್ರಜ್ಞಾನ, ಸಂಶೋಧನೆ ಹಾಗೂ ಅಭಿವೃದ್ಧಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಸ್‌ಎಂಇ) ವಹಿವಾಟು ವಿಸ್ತರಣೆ.  

ಕೈಗಾರಿಕಾ ಸ್ನೇಹಿ ಕಾಗದದಲ್ಲಷ್ಟೇ ಉಳಿದಿದೆಯಲ್ಲ?

ಹೌದು ಈವರೆಗೆ ಅಂತಹ ಸ್ಥಿತಿ ಇತ್ತು. ಈಗ ಎಲ್ಲ ತೊಡಕುಗಳನ್ನು ನಿವಾರಿಸಲಾಗಿದೆ. ‘ಇನ್ವೆಸ್ಟ್‌ ಕರ್ನಾಟಕ ಫೋರಂ’ಗೆ ಹೊಸ ರೂಪ ನೀಡಲಾಗಿದೆ. ಮುಖ್ಯಸ್ಥರನ್ನಾಗಿ ಐಎಎಸ್‌ ಅಧಿಕಾರಿ ನೇಮಿಸಲಾಗಿದೆ. ಈ ಫೋರಂ ಹೂಡಿಕೆದಾರರ ಎಲ್ಲ ಅಗತ್ಯಗಳನ್ನು ಪೂರೈಸಲು ಶ್ರಮಿಸಲಿದೆ.  ಭೂಮಿ ತಕ್ಷಣಕ್ಕೆ ಸಿಗುವಂತೆ ಮಾಡಲು ಕೈಗಾರಿಕಾ ಪಾರ್ಕ್‌ಗಳನ್ನು (ಭೂ ಬ್ಯಾಂಕ್) ಸಿದ್ಧಗೊಳಿಸಲಾಗಿದೆ. ‘ವಿಷನ್‌ ಗ್ರೂಪ್‌’ ರಚಿಸಲಾಗಿದೆ. ಏಕ ಗವಾಕ್ಷಿ ಮೂಲಕ ಎಲ್ಲ ಮೂಲಸೌಕರ್ಯಗಳಿಗೂ ಕಾಲಮಿತಿಯ ಒಳಗೆ ಅನುಮತಿ ದೊರಕಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.