ಬೆಂಗಳೂರು: ರಾಜ್ಯ ಸರ್ಕಾರದ ವಿದ್ಯುತ್ ದರ ಏರಿಕೆ ನಿರ್ಧಾರವು ಅವೈಜ್ಞಾನಿಕವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ), ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಮತ್ತು ಪೀಣ್ಯ ಕೈಗಾರಿಕಾ ಸಂಘ (ಪಿಐಎ) ಆಕ್ಷೇಪ ವ್ಯಕ್ತಪಡಿಸಿವೆ.
ರಾಜ್ಯ ಸರ್ಕಾರವು ಏಪ್ರಿಲ್ 1ರಿಂದ ಪ್ರತಿ ಯೂನಿಟ್ ವಿದ್ಯುತ್‌ಗೆ 36 ಪೈಸೆ ದರ ಹೆಚ್ಚಳಕ್ಕೆ ಮುಂದಾಗಿದೆ. ಇದು ಕೈಗಾರಿಕಾ ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದು, ರಾಜ್ಯದ ಆರ್ಥಿಕತೆಗೂ ಪೆಟ್ಟು ನೀಡಲಿದೆ. ಹಾಗಾಗಿ, ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒಕ್ಕೊರಲ ಬೇಡಿಕೆ ಮಂಡಿಸಿವೆ.
‘ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ವಿದ್ಯುತ್ ದರ ಹೆಚ್ಚಿದೆ. ಪದೇ ಪದೇ ಏರಿಕೆ ಮಾಡುವುದು ಸರಿಯಲ್ಲ. ಇದರಿಂದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಉತ್ಪಾದನಾ ವೆಚ್ಚ ಹೆಚ್ಚಲಿದೆ. ಬೆಲೆ ಏರಿಕೆ ಮಾಡುವುದರಿಂದ ಉತ್ಪನ್ನಗಳಿಗೆ ಬೇಡಿಕೆ ಕುಗ್ಗಲಿದೆ’ ಎಂದು ಬುಧವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಹೇಳಿದರು.
ಕೈಗಾರಿಕೆಗಳ ಲಾಭಾಂಶ ಕುಸಿಯಲಿದೆ. ಇದರಿಂದ ಉದ್ಯೋಗ ಕಡಿತವಾಗಲಿದೆ. ಅಲ್ಲದೆ, ಕೈಗಾರಿಕೆಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಸಾಧ್ಯತೆಯಿದೆ ಎಂದರು.
ರಾಜ್ಯದಲ್ಲಿ ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆಗೆ ನಮ್ಮ ವಿರೋಧವಿಲ್ಲ. ಆದರೆ, ಹಳೆಯ ಮೀಟರ್ ಅಳವಡಿಕೆ ವೇಳೆ ಠೇವಣಿ ತೆಗೆದುಕೊಳ್ಳಲಾಗಿದೆ. ಮತ್ತೆ ಈ ಮೀಟರ್‌ಗೆ ತೆಗೆದುಕೊಳ್ಳುವುದು ಬೇಡ. ಉಚಿತವಾಗಿ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಆಸ್ತಿ ತೆರಿಗೆ ಹೆಚ್ಚಳವು ಕೈಗಾರಿಕೆಗಳ ಬಂಡವಾಳ ಹೂಡಿಕೆ ಮೇಲೆ ನೇರ ಪರಿಣಾಮ ಬೀರಲಿದೆ. ಭೂಮಿಯ ವೆಚ್ಚ ಏರಿಕೆಯಾಗಲಿದೆ. ಹೀಗಾಗಿ, ಸರ್ಕಾರ ಸಮತೋಲನಯುತ ತೆರಿಗೆ ನೀತಿ ಅನುಸರಿಸಬೇಕು. ಇ–ಖಾತಾ ಪ್ರಕ್ರಿಯೆಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
Cut-off box - ಏ. 5ರಂದು ಉದ್ಯೋಗ ಮೇಳ ಬೆಂಗಳೂರಿನ ಎಫ್‌ಕೆಸಿಸಿಐ ಕಚೇರಿಯಲ್ಲಿ ಏಪ್ರಿಲ್ 5ರಂದು ಉದ್ಯೋಗ ಮೇಳ ಆಯೋಜಿಸಲಾಗಿದ್ದು ಈಗಾಗಲೇ 5 ಸಾವಿರಕ್ಕೂ ಹೆಚ್ಚು ಯುವಜನರು ನೋಂದಾಯಿಸಿಕೊಂಡಿದ್ದಾರೆ. 110 ಕಂಪನಿಗಳು ಭಾಗವಹಿಸಲಿವೆ. ಎಫ್‌ಕೆಸಿಸಿಐ ಕಾಸಿಯಾ ಮತ್ತು ಪಿಐಎನಿಂದ ಜಂಟಿಯಾಗಿ ಮೇ 30ರಿಂದ ಮೂರು ದಿನದವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂಡಿಯಾ ಎಂಎಸ್‌ಎಂಇ ಸಮಾವೇಶ ಆಯೋಜಿಸಲಾಗಿದೆ. ಆಗಸ್ಟ್ 1ರಿಂದ ಮೂರು ದಿನದವರೆಗೆ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ‘ಅಗ್ರಿಟೆಕ್’ ಹೆಸರಿನಡಿ ಕೃಷಿ ಆಧರಿತ ಆಹಾರ ಸಂಸ್ಕರಣಾ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.