ADVERTISEMENT

ಕೊರೊನೋತ್ತರ ಭಾರತದಲ್ಲಿ ತಗ್ಗಲಿರುವ ಸಂಪತ್ತಿನ ಅಸಮಾನತೆ: ಎಸ್‌ಬಿಐ ಅಧ್ಯಯನ ವರದಿ

ಪಿಟಿಐ
Published 23 ಜೂನ್ 2020, 17:09 IST
Last Updated 23 ಜೂನ್ 2020, 17:09 IST
ಅಸಮಾನತೆ
ಅಸಮಾನತೆ   

ಮುಂಬೈ: ಕೊರೊನೋತ್ತರದ ನಂತರ ದೇಶದಲ್ಲಿ ಸಂಪತ್ತಿನ ಅಸಮಾನತೆಯ ಅಂತರ ಕಡಿಮೆಯಾಗಲಿದೆ.ಸಿರಿವಂತ ರಾಜ್ಯಗಳ ವರಮಾನವು ಬಡ ರಾಜ್ಯಗಳ ವರಮಾನಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಎಸ್‌ಬಿಐ ಅಧ್ಯಯನ ವರದಿ ತಿಳಿಸಿದೆ.

ಭಾರತದಲ್ಲಿ ತಲಾ ಆದಾಯ 2020–21ರಲ್ಲಿ ಶೇ 5.4ರಷ್ಟು ಇಳಿಕೆಯಾಗಲಿದ್ದು, ₹ 1.43 ಲಕ್ಷಕ್ಕೆ ತಲುಪಲಿದೆ.

ದೆಹಲಿ ಮತ್ತು ಚಂಡೀಗಢದಲ್ಲಿ ತಲಾ ಆದಾಯ ಕ್ರಮವಾಗಿ ಶೇ –15.4 ರಷ್ಟು ಮತ್ತುಶೇ –13.9ರಷ್ಟು ಇಳಿಕೆಯಾಗಿದೆ. ದೇಶದ ಒಟ್ಟಾರೆ ತಲಾ ಆದಾಯದಲ್ಲಿನ ಇಳಿಕೆಗಿಂತಲೂ (ಶೇ –5.4) ಮೂರು ಪಟ್ಟು ಹೆಚ್ಚು ಇಳಿಕೆಯಾಗಲಿದೆ.

ADVERTISEMENT

ಒಟ್ಟಾರೆಯಾಗಿ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಲಾ ಆದಾಯ ಎರಡಂಕಿಯಷ್ಟು ಇಳಿಕೆಯಾಗಲಿದೆ. ಈ ರಾಜ್ಯಗಳು ದೇಶದ ಒಟ್ಟಾರೆ ಜಿಡಿಪಿಗೆ ಶೇ 47ರಷ್ಟು ಕೊಡುಗೆ ನೀಡುತ್ತಿವೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು ರಾಜ್ಯಗಳ ತಲಾ ಆದಾಯದಲ್ಲಿ ಶೇ 10–12ರಷ್ಟು ಕಡಿಮೆಯಾಗಲಿದೆ. ಆದರೆ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಒಡಿಶಾದಲ್ಲಿ ಇಳಿಕೆ ಪ್ರಮಾಣ ಶೇ 8ಕ್ಕಿಂತಲೂ ಕಡಿಮೆ ಇರಲಿದೆ ಎಂದು ವರದಿ ತಿಳಿಸಿದೆ.

ರೆಡ್‌ ಝೋನ್‌ ವ್ಯಾಪಿಗೆ ಬಂದಿರುವ ನಗರ ಪ್ರದೇಶಗಳಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ. ಮಾರುಕಟ್ಟೆಗಳು, ಶಾಪಿಂಗ್‌ ಕಾಂಪ್ಲೆಕ್ಸ್‌ ಮತ್ತು ಮಾಲ್‌ಗಳನ್ನು ಮುಚ್ಚಿರುವುದು ಈ ರಾಜ್ಯಗಳ ಆದಾಯದ ಮೇಲೆ ತೀವ್ರ ಪರಿಣಾಮ ಬೀರಿದೆ.

ಮಾರುಕಟ್ಟೆಗಳು ನಿಧಾನವಾಗಿ ತೆರೆಯುತ್ತಿದ್ದರೂ ಗ್ರಾಹಕರ ಸಂಖ್ಯೆಯು ಕೋವಿಡ್‌ಗಿಂತಲೂ ಮುಂಚಿನ ಸ್ಥಿತಿಯ ಶೇ 70–80ರಷ್ಟು ಕಡಿಮೆ ಇದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.