ADVERTISEMENT

ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆ 13 ತಿಂಗಳ ಕನಿಷ್ಠ

ಪಿಟಿಐ
Published 10 ಜೂನ್ 2025, 14:02 IST
Last Updated 10 ಜೂನ್ 2025, 14:02 IST
   

ನವದೆಹಲಿ: ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಿಗೆ ಒಳಹರಿವು ಮೇ ತಿಂಗಳಲ್ಲಿ ₹19,013 ಕೋಟಿಗೆ ಇಳಿಕೆ ಆಗಿದೆ. ಇದು 13 ತಿಂಗಳ ಕನಿಷ್ಠ ಮಟ್ಟ. ಲಾರ್ಜ್‌ ಕ್ಯಾಪ್, ಮಿಡ್‌ ಕ್ಯಾಪ್ ಮತ್ತು ಸ್ಮಾಲ್‌ ಕ್ಯಾಪ್‌ ಫಂಡ್‌ಗಳಿಗೆ ಹಣದ ಒಳಹರಿವು ತಗ್ಗಿದೆ. ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಹೂಡಿಕೆ ಹಿಂಪಡೆದಿದ್ದು ಇದಕ್ಕೆ ಒಂದು ಕಾರಣ.

ಮೇ ತಿಂಗಳನ್ನು ಪರಿಗಣಿಸಿದರೆ, ಸತತ ಐದು ತಿಂಗಳುಗಳಿಂದ ಒಳಹರಿವು ತಗ್ಗುತ್ತಿದೆ. ಏಪ್ರಿಲ್‌ ತಿಂಗಳಲ್ಲಿ ₹24,269 ಕೋಟಿ ಒಳಹರಿವು ಇತ್ತು. ಅದಕ್ಕೆ ಹೋಲಿಸಿದರೆ ಮೇ ತಿಂಗಳಲ್ಲಿನ ಒಳಹರಿವಿನ ಪ್ರಮಾಣವು ಶೇ 22ರಷ್ಟು ಕಡಿಮೆ ಆಗಿದೆ. ಭಾರತದ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟವು (ಎಎಂಎಫ್‌ಐ) ಈ ಮಾಹಿತಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ಆಗುವ ಹೂಡಿಕೆಯು ಮೇ ತಿಂಗಳಲ್ಲಿ ₹26,688 ಕೋಟಿ ಆಗಿದೆ. ಇದು ಏಪ್ರಿಲ್‌ ತಿಂಗಳ ಎಸ್‌ಐಪಿ ಹೂಡಿಕೆಯಾದ ₹26,632 ಕೋಟಿಗಿಂತ ತುಸು ಹೆಚ್ಚಿದೆ.

ADVERTISEMENT

‘ಏಪ್ರಿಲ್‌ಗೆ ಹೋಲಿಸಿದರೆ ಮೇ ತಿಂಗಳಲ್ಲಿ ಷೇರು ಮಾರುಕಟ್ಟೆಯು ಹೆಚ್ಚು ಏರಿಕೆ ಕಾಣಲಿಲ್ಲ. ಜಾಗತಿಕ ಆರ್ಥಿಕ ಸಮಸ್ಯೆಗಳ ಕುರಿತು ಕೆಲವು ಕಳವಳಗಳು ಇದ್ದವು. ಹಿಂದಿನ ತಿಂಗಳುಗಳಲ್ಲಿ ಷೇರುಪೇಟೆಗಳು ಕಂಡ ಏರಿಕೆಯ ನಂತರ ಮೇ ತಿಂಗಳಲ್ಲಿ ಹೂಡಿಕೆದಾರರು ಲಾಭ ಗಳಿಕೆಗಾಗಿ ಮಾರಾಟಕ್ಕೆ ಮುಂದಾಗಿರಬಹುದು. ಇವೆಲ್ಲ ಹೂಡಿಕೆ ಪ್ರಮಾಣ ತಗ್ಗಿರುವುದಕ್ಕೆ ಕಾರಣಗಳಾಗಿರಬಹುದು’ ಎಂದು ಮಾರ್ನಿಂಗ್‌ಸ್ಟಾರ್‌ ರಿಸರ್ಚ್‌ ಇಂಡಿಯಾ ಸಂಸ್ಥೆಯ ಸಹ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ. ಫ್ಲೆಕ್ಸಿ ಕ್ಯಾಪ್‌ ಫಂಡ್‌ಗಳಲ್ಲಿ ಹೂಡಿಕೆಯು ಹೆಚ್ಚಳ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.