ADVERTISEMENT

ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌ ವಾರ್ಷಿಕ ವೇತನ ₹34.27 ಕೋಟಿ

ಪಿಟಿಐ
Published 2 ಜೂನ್ 2020, 11:15 IST
Last Updated 2 ಜೂನ್ 2020, 11:15 IST
ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌
ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌    

ನವದೆಹಲಿ: ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌ ಅವರ ವಾರ್ಷಿಕ ಒಟ್ಟು ವೇತನ ಶೇ 39ರಷ್ಟು ಏರಿಕೆಯಾಗಿದ್ದು, 2019–20ನೇ ಹಣಕಾಸು ವರ್ಷದಲ್ಲಿ ₹34.27 ಕೋಟಿ ಪಡೆದಿರುವುದು ಕಂಪನಿಯ ವಾರ್ಷಿಕ ವರದಿಯಲ್ಲಿ ದಾಖಲಾಗಿದೆ.

2018–19ರಲ್ಲಿ ಸಲೀಲ್‌ ಪಾರೇಖ್‌ ಒಟ್ಟು ವಾರ್ಷಿಕ ವೇತನ ₹24.37 ಕೋಟಿ ನಿಗದಿಯಾಗಿತ್ತು.

ಪಾರೇಖ್ ₹16.85 ಕೋಟಿ ಸಂಬಳ, ₹17.04 ಕೋಟಿ ಮೌಲ್ಯದ ಷೇರುಗಳು ಹಾಗೂ ಇತರೆ ₹38 ಲಕ್ಷ ಪಡೆದಿರುವುದು 2019–20ರ ವಾರ್ಷಿಕ ವರದಿಯಲ್ಲಿ ಪ್ರಕಟವಾಗಿದೆ. ಇನ್ಫೊಸಿಸ್‌ ಅಧ್ಯಕ್ಷ ನಂದನ್‌ ನಿಲೇಕಣಿ ಸ್ವಯಂ ಪ್ರೇರಣೆಯಿಂದ ತನ್ನ ಸೇವೆಗೆ ಯಾವುದೇ ವೇತನ ಪಡೆದಿರುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಒಒ) ಯು.ಬಿ.ಪ್ರವೀಣ್‌ ರಾವ್‌ ಅವರ ಒಟ್ಟು ವೇತನ 2019–20ರಲ್ಲಿ ಶೇ 17.1ರಷ್ಟು ಏರಿಕೆಯಾಗಿದೆ. ₹9.05 ಕೋಟಿ ಇದ್ದ ಅವರ ವೇತನ ₹10.6 ಕೋಟಿಗೆ ಹೆಚ್ಚಿಸಲಾಗಿದೆ.

ದೇಶದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾಗಿರುವ ಟಿಸಿಎಸ್‌ನ ಸಿಇಒ ಮತ್ತು ಎಂಡಿ ರಾಜೇಶ್‌ ಗೋಪಿನಾಥ್‌ ಅವರ ವೇತನ ಇಳಿಕೆಯಾಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ, 2019–20ರಲ್ಲಿ ಒಟ್ಟು ವೇತನ ಶೇ 16ರಷ್ಟು ಕಡಿಮೆಯಾಗಿ ₹13.3 ಕೋಟಿ ಆಗಿದೆ.

ವಿಪ್ರೊ ಕಂಪನಿಯ ಸಿಇಒ ಆಬಿದಲಿ ಝಡ್ ನೀಮಚ್ವಾಲಾ ಅವರ ವೇತನ ಶೇ 11.8ರಷ್ಟು ಹೆಚ್ಚಳ ಕಂಡಿದ್ದು, 2019–20ರಲ್ಲಿ 4.42 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಸುಮಾರು ₹33.38 ಕೋಟಿ) ಪಡೆದಿದ್ದಾರೆ.

ಯುರೋಪ್‌ ರಾಷ್ಟ್ರಗಳು ಹಾಗೂ ಅಮೆರಿಕದ ಹಲವು ಭಾಗಗಳಲ್ಲಿ ಕಾರ್ಯಾಚರಣೆ ಪುನರಾರಂಭಗೊಳ್ಳುತ್ತಿದ್ದು, ನಮ್ಮ ಕಾರ್ಯವ್ಯಾಪ್ತಿ ವಿಸ್ತರಣೆಯಾಗಲಿದೆ ಎಂದು ಸಲೀಲ್‌ ಪಾರೇಖ್‌ ಕೋವಿಡ್‌–19 ಪರಿಸ್ಥಿತಿಯಲ್ಲಿ ಕಂಪನಿ ಸ್ಥಿತಿಯ ಕುರಿತಂತೆ ತಿಳಿಸಿದ್ದಾರೆ. ಇನ್ಫೊಸಿಸ್‌ನ 39ನೇ ವಾರ್ಷಿಕ ಸಭೆಯು ಜೂನ್‌ 27ರಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.