ಬೆಂಗಳೂರು: ದೇಶದ ಪ್ರಮುಖ ಐ.ಟಿ ಕಂಪನಿ ಇನ್ಫೊಸಿಸ್ 2024–25ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹6,368 ಕೋಟಿ ನಿವ್ವಳ ಲಾಭ ಗಳಿಸಿದೆ.
ಹಿಂದಿನ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ₹5,945 ಕೋಟಿ ಲಾಭ ದಾಖಲಿಸಿತ್ತು. ಇದಕ್ಕೆ ಹೋಲಿಸಿದರೆ ಶೇ 7.1ರಷ್ಟು ಏರಿಕೆಯಾಗಿದೆ. ಶೇ 80ಕ್ಕೂ ಹೆಚ್ಚು ಗಳಿಕೆಯು ವಿದೇಶಿ ಮಾರುಕಟ್ಟೆಯಿಂದ ಬಂದಿದೆ ಎಂದು ಕಂಪನಿಯು ಗುರುವಾರ ಷೇರುಪೇಟೆಗೆ ತಿಳಿಸಿದೆ.
2022–23ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ₹7,969 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಜೂನ್ ತ್ರೈಮಾಸಿಕದ ಲಾಭದಲ್ಲಿ ಶೇ 20ರಷ್ಟು ಕುಸಿದಿದೆ.
ಕಂಪನಿಯ ಬೆಳವಣಿಗೆ ಆಧಾರದ ಮೇಲೆ ಈ ವರ್ಷದಲ್ಲಿ ಹೊಸದಾಗಿ 20 ಸಾವಿರ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದೆ.
ಈ ತ್ರೈಮಾಸಿಕದಲ್ಲಿ ಕಂಪನಿ 34 ಒಪ್ಪಂದಗಳನ್ನು ಮಾಡಿಕೊಂಡಿದ್ದು, ಇದರ ಮೌಲ್ಯ ₹34,288 ಕೋಟಿ ಆಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕಾರ್ಯಾಚರಣೆ ಲಾಭದಲ್ಲಿ ಶೇ 22ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಿದೆ.
ಕಳೆದ ವರ್ಷದ ಜೂನ್ ಅಂತ್ಯಕ್ಕೆ ಕಂಪನಿಯಲ್ಲಿ ಒಟ್ಟು 3.36 ಲಕ್ಷ ಉದ್ಯೋಗಿಗಳಿದ್ದರು. ಸದ್ಯ 3.15 ಲಕ್ಷಕ್ಕೆ ಇಳಿಕೆಯಾಗಿದೆ. ಶೇ 6ರಷ್ಟು ಉದ್ಯೋಗಿಗಳು ಕಂಪನಿ ತೊರೆದಿದ್ದಾರೆ.
ಕನ್ನಡಿಗರಿಗೆ ಉದ್ಯೋಗ ನೀಡಲು ಬದ್ಧ: ಸಲೀಲ್
‘ಕರ್ನಾಟಕದಲ್ಲಿರುವ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದ ಮೀಸಲಾತಿ ನೀಡುವ ಸಂಬಂಧ ರಾಜ್ಯ ಸರ್ಕಾರ ರೂಪಿಸುವ ನಿಯಮಾವಳಿಗಳನ್ನು ಪಾಲಿಸಲು ಕಂಪನಿ ಸಿದ್ಧವಿದೆ’ ಎಂದು ಇನ್ಫೊಸಿಸ್‌ನ ಸಿಇಒ ಸಲೀಲ್ ಪರೇಖ್ ಹೇಳಿದ್ದಾರೆ. ತ್ರೈಮಾಸಿಕ ಫಲಿತಾಂಶದ ವರದಿ ಬಿಡುಗಡೆಯ ಬಳಿಕ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬೆಂಬಲ ನೀಡುವ ಮೂಲಕ ಕಂಪನಿಯು ಕಾರ್ಯ ನಿರ್ವಹಿಸಲಿದೆ ಎಂದರು. ಕಂಪನಿಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿಯಮಾವಳಿಗಳ ಅನ್ವಯ ಕಾರ್ಯ ನಿರ್ವಹಣೆಗೆ ಯೋಜನೆ ರೂಪಿಸುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರ ಯಾವ ನಿರ್ಧಾರಕೈಗೊಳ್ಳಲಿದೆ ಎಂಬುದನ್ನು ಎದುರು ನೋಡುತ್ತಿದೆ. ಸರ್ಕಾರಗಳು ರೂಪಿಸುವ ಕಾಯ್ದೆ ಮತ್ತು ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.