ADVERTISEMENT

ಇನ್ಫೊಸಿಸ್‌ ಲಾಭ ಶೇ 8ರಷ್ಟು ಹೆಚ್ಚಳ: ಮಾರುಕಟ್ಟೆ ತಜ್ಞರ ಅಂದಾಜು ಮೀರಿಸಿದ ಕಂಪನಿ

ವರಮಾನದಲ್ಲಿ ಯುರೋಪ್ ಪಾಲು ಏರಿಕೆ

ಪಿಟಿಐ
Published 23 ಜುಲೈ 2025, 15:26 IST
Last Updated 23 ಜುಲೈ 2025, 15:26 IST
ಇನ್ಫೊಸಿಸ್‌ ಲಿಮಿಟೆಡ್‌ನ ಸಿಇಒ ಸಲೀಲ್ ಪಾರೇಖ್ ಮತ್ತು ಕಂಪನಿಯ ಸಿಎಫ್‌ಒ ಜಯೇಶ್‌ ಸಂಘರಾಜಕಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು –ಪಿಟಿಐ ಚಿತ್ರ
ಇನ್ಫೊಸಿಸ್‌ ಲಿಮಿಟೆಡ್‌ನ ಸಿಇಒ ಸಲೀಲ್ ಪಾರೇಖ್ ಮತ್ತು ಕಂಪನಿಯ ಸಿಎಫ್‌ಒ ಜಯೇಶ್‌ ಸಂಘರಾಜಕಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು –ಪಿಟಿಐ ಚಿತ್ರ   

ಬೆಂಗಳೂರು: ದೇಶದ ಎರಡನೆಯ ಅತಿದೊಡ್ಡ ಐ.ಟಿ. ಸೇವಾ ಕಂಪನಿ ಇನ್ಫೊಸಿಸ್‌ ಲಿಮಿಟೆಡ್‌ನ ಜೂನ್‌ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇಕಡ 8.7ರಷ್ಟು ಹೆಚ್ಚಳ ಆಗಿದೆ. ಕಂಪನಿಯು ಈ ತ್ರೈಮಾಸಿಕದಲ್ಲಿ ₹6,921 ಕೋಟಿ ನಿವ್ವಳ ಲಾಭ ಗಳಿಸಿದೆ. ಕಂಪನಿಯು ಮಾರುಕಟ್ಟೆ ತಜ್ಞರ ಅಂದಾಜಿಗಿಂತ ಹೆಚ್ಚು ಲಾಭ ಗಳಿಸಿದೆ.

ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ₹6,368 ಕೋಟಿ ಆಗಿತ್ತು. ವಾರ್ಷಿಕ ವರಮಾನ ಬೆಳವಣಿಗೆ ಮುನ್ನೋಟವನ್ನು ಕಂಪನಿಯು ಶೇ1ರಿಂದ ಶೇ 3ರ ಮಟ್ಟಕ್ಕೆ ಪರಿಷ್ಕರಿಸಿದೆ. ಈ ಹಿಂದೆ ಇದು ಶೇ 0–3 ಆಗಿತ್ತು.

ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆ ವರಮಾನವು ₹42,279 ಕೋಟಿ ಆಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯ ಕಾರ್ಯಾಚರಣೆ ವರಮಾನಕ್ಕೆ ಹೋಲಿಸಿದರೆ ಶೇ 7.53ರಷ್ಟು ಹೆಚ್ಚು. ಆದರೆ ಜನವರಿ–ಮಾರ್ಚ್‌ ತ್ರೈಮಾಸಿಕಕ್ಕೆ ಹೋಲಿಸಿದರೆ ಕಂಪನಿಯ ನಿವ್ವಳ ಲಾಭವು ಶೇ 1.5ರಷ್ಟು ಕಡಿಮೆ ಆಗಿದೆ.

ADVERTISEMENT

‘ಬೃಹತ್‌ ಉದ್ಯಮಗಳಿಗೆ ಅಗತ್ಯವಿರುವ ಎ.ಐ. ಸೌಲಭ್ಯ ಒದಗಿಸುವಲ್ಲಿ ನಾವು ಹೊಂದಿರುವ ನಾಯಕತ್ವದ ಸ್ಥಾನ ಕೂಡ ನಮ್ಮ ವಹಿವಾಟಿನ ಬೆಳವಣಿಗೆಗೆ ಮುಖ್ಯ ಕಾರಣವಾಗಿ ಒದಗಿಬಂದಿದೆ’ ಎಂದು ಕಂಪನಿಯ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪಾರೇಖ್ ಹೇಳಿದ್ದಾರೆ.

ಈ ತ್ರೈಮಾಸಿಕದಲ್ಲಿ ಕಂಪನಿಯ ನೌಕರರ ಸಂಖ್ಯೆಯು 210ರಷ್ಟು ಜಾಸ್ತಿ ಆಗಿದೆ. ಅಲ್ಲದೆ, ಈ ಮೊದಲೇ ಘೋಷಿಸಿರುವಂತೆ 20 ಸಾವಿರ ಮಂದಿ ಹೊಸಬರನ್ನು ಈ ವರ್ಷದಲ್ಲಿ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯು ಚಾಲ್ತಿಯಲ್ಲಿದೆ ಎಂದು ಕಂಪನಿ ಹೇಳಿದೆ.

ಹಣಕಾಸು ಸೇವೆಗಳ ವಲಯವು ಕಂಪನಿಯ ಒಟ್ಟು ವರಮಾನದಲ್ಲಿ ಶೇ 27.9ರಷ್ಟು ಪಾಲು ಪಡೆದಿದೆ. ನಂತರದ ಸ್ಥಾನಗಳಲ್ಲಿ ತಯಾರಿಕಾ ವಲಯ (ಶೇ 16.1ರಷ್ಟು) ಹಾಗೂ ರಿಟೇಲ್‌ (ಶೇ 13.4ರಷ್ಟು) ವಲಯ ಇವೆ.

ಕಂಪನಿಯ ವರಮಾನದಲ್ಲಿ ಯುರೋಪ್‌ ವಲಯದ ಪಾಲು ಶೇ 31.5ಕ್ಕೆ ಏರಿಕೆ ಆಗಿದೆ. ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಶೇ 28.4ರಷ್ಟು ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.