ADVERTISEMENT

ಇನ್ಫೊಸಿಸ್ ಲಾಭ, ವರಮಾನ ಹೆಚ್ಚಳ: ಷೇರುದಾರರಿಗೆ ₹ 23 ಮಧ್ಯಂತರ ಲಾಭಾಂಶ ಘೋಷಣೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 15:43 IST
Last Updated 16 ಅಕ್ಟೋಬರ್ 2025, 15:43 IST
<div class="paragraphs"><p>ಇನ್ಫೊಸಿಸ್‌ ಸಿಇಒ ಸಲೀಲ್ ಪಾರೇಖ್ </p></div>

ಇನ್ಫೊಸಿಸ್‌ ಸಿಇಒ ಸಲೀಲ್ ಪಾರೇಖ್

   

ಪಿಟಿಐ ಚಿತ್ರ

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಸೇವಾ ಕಂಪನಿ ಇನ್ಫೊಸಿಸ್‌ ಸೆಪ್ಟೆಂಬರ್‌ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು, ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭವು ಶೇಕಡ 13.2ರಷ್ಟು ಹೆಚ್ಚಳ ಕಂಡಿದೆ.

ADVERTISEMENT

ಹಿಂದಿನ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಕಂಪನಿಯು ₹6,506 ಕೋಟಿ ಲಾಭ ಗಳಿಸಿತ್ತು. ಈ ಬಾರಿ ಲಾಭವು ₹7,364 ಕೋಟಿಗೆ ಹೆಚ್ಚಳ ಆಗಿದೆ. ಕಂಪನಿಯು ತನ್ನ ಷೇರುದಾರರಿಗೆ ಪ್ರತಿ ಷೇರಿಗೆ ₹23ರಷ್ಟು ಮಧ್ಯಂತರ ಲಾಭಾಂಶ ನೀಡುವುದಾಗಿ ಘೋಷಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹21ರಷ್ಟು ಲಾಭಾಂಶ ನೀಡಿತ್ತು.

ನಗರದ ಇನ್ಫೊಸಿಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಂಪನಿಯ ಸಿಇಒ ಸಲೀಲ್ ಪಾರೇಖ್ ಈ ವಿವರ ನೀಡಿದರು. ಕಂಪನಿಯ ವರಮಾನವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹44,490 ಆಗಿದೆ. ಹಿಂದಿನ ವರ್ಷದಲ್ಲಿ ಇದು ₹40,986 ಕೋಟಿ ಆಗಿತ್ತು. ವರಮಾನದಲ್ಲಿ ಶೇ 8.6ರಷ್ಟು ಹೆಚ್ಚಳ ಆಗಿದೆ.

ಮುಂಬರುವ ದಿನಗಳಲ್ಲಿ ತನ್ನ ವಹಿವಾಟು ಇನ್ನಷ್ಟು ಸುಧಾರಣೆ ಕಾಣುವ ವಿಶ್ವಾಸವನ್ನು ಕಂಪನಿಯು ವ್ಯಕ್ತಪಡಿಸಿದೆ. ಪ್ರಸಕ್ತ ಹಣಕಾಸು ವರ್ಷಕ್ಕೆ ವರಮಾನ ಹೆಚ್ಚಳವು ಶೇ 2–3ರ ಮಟ್ಟದಲ್ಲಿ ಇರಲಿದೆ ಎಂದು ಕಂಪನಿಯು ಅಂದಾಜು ಮಾಡಿದೆ. ಈ ಹಿಂದೆ ಕಂಪನಿಯು ವರಮಾನ ಹೆಚ್ಚಳದ ಅಂದಾಜನ್ನು ಶೇ 1–3ರ ಮಟ್ಟದಲ್ಲಿ ಇರಿಸಿತ್ತು. ಅಂದರೆ, ಕಂಪನಿಯು ತನ್ನ ವರಮಾನದ ಹೆಚ್ಚಳವು ಜಾಸ್ತಿ ಆಗಬಹುದು ಎಂದು ಅಂದಾಜು ಮಾಡಿದಂತಾಗಿದೆ.

ಕಂಪನಿಯು ಕೃತಕ ಬುದ್ಧಿಮತ್ತೆ (ಎ.ಐ) ಸಾಮರ್ಥ್ಯವನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸುತ್ತಿದೆ. ದೊಡ್ಡ ಕಂಪನಿಗಳ ಜೊತೆ ಎ.ಐ ವಿಚಾರವಾಗಿ ಕಂಪನಿಯು ಪಾಲುದಾರಿಕೆ ಹೊಂದಿದೆ ಎಂದು ಪಾರೇಖ್ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಅಮೆರಿಕವು ಎಚ್‌1–ಬಿ ವೀಸಾ ಶುಲ್ಕವನ್ನು ಹೆಚ್ಚಿಸಿರುವುದರ ಪರಿಣಾಮವಾಗಿ ಕಂಪನಿಯ ಕೆಲಸಗಳ ಮೇಲೆ ಪರಿಣಾಮ ಉಂಟಾಗುವುದೇ ಎಂಬ ಪ್ರಶ್ನೆಗೆ ಅವರು, ‘ಯಾವುದೇ ಅಡತಡೆಗಳು ಇಲ್ಲದೆ ನಾವು ನಮ್ಮ ಗ್ರಾಹಕರಿಗೆ ಸೇವೆಗಳನ್ನು ಒದಗಿಸುತ್ತಿದ್ದೇವೆ’ ಎಂದರು.

ಕಂಪನಿಯು ಹುಬ್ಬಳ್ಳಿಯ ಕ್ಯಾಂಪಸ್‌ನಲ್ಲಿ ಸ್ಥಳೀಯರನ್ನು ನೇಮಕ ಮಾಡಿಕೊಳ್ಳುತ್ತಿದೆ. ಆದರೆ ಸ್ಥಳೀಯರನ್ನು ಎಷ್ಟು ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂಬುದರ ವಿವರ ನೀಡಲಾಗದು ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಜಯೇಶ್‌ ಸಂಘರಾಜ್ಕಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.