ADVERTISEMENT

ಆರ್ಥಿಕ ಚೇತರಿಕೆಗೆ ಮೂಲಸೌಕರ್ಯಕ್ಕೆ ಆದ್ಯತೆ: ಶಕ್ತಿಕಾಂತ್‌ ದಾಸ್

ಪಿಟಿಐ
Published 27 ಜುಲೈ 2020, 16:29 IST
Last Updated 27 ಜುಲೈ 2020, 16:29 IST
ಶಕ್ತಿಕಾಂತ್‌ ದಾಸ್
ಶಕ್ತಿಕಾಂತ್‌ ದಾಸ್   

ನವದೆಹಲಿ: ಕೋವಿಡ್‌–19 ಪರಿಣಾಮಗಳಿಂದ ನಲುಗಿರುವ ಆರ್ಥಿಕತೆಯ ಚೇತರಿಕೆಗೆ ಮೂಲಸೌಕರ್ಯ ವಲಯದಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೂಲಸೌಕರ್ಯ ವಲಯದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಯ ಅಗತ್ಯವಿದೆ. ಇದಕ್ಕಾಗಿ ಖಾಸಗಿ ಮತ್ತು ಸರ್ಕಾರಿ ವಲಯಗಳು ಪ್ರಮುಖ ಪಾತ್ರ ವಹಿಸಬೇಕಿದೆ’ ಎಂದರು.

‘ಮೂಲಸೌಕರ್ಯ ವಲಯವು ಆರ್ಥಿಕತೆಯ ಬೆಳವಣಿಗೆಯ ಚಾಲಕ ಶಕ್ತಿ. ಮೂಲಸೌಕರ್ಯ ವಲಯದ ಕೆಲವು ದೊಡ್ಡ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ವೇಗ ನೀಡಬಹುದು. ಕೃಷಿ ವಲಯದಲ್ಲಿನ ಇತ್ತೀಚಿನ ಸುಧಾರಣೆಗಳಿಂದಾಗಿ ಹೊಸ ಅವಕಾಶಗಳು ತೆರೆದುಕೊಂಡಿವೆ. ಕೃಷಿ ವಲಯದ ಅದೃಷ್ಟ ಖುಲಾಯಿಸಿದೆ. ಜಾಗತಿಕ ಪೂರೈಕೆ ವ್ಯವಸ್ಥೆಯಲ್ಲಿ ನಮ್ಮ ಭಾಗವಹಿಸುವಿಕೆ ಶೇ 1ರಷ್ಟು ಹೆಚ್ಚಳವಾದರೂ ಅದರಿಂದ ದೇಶದ ತಲಾ ಆದಾಯದ ಮಟ್ಟದಲ್ಲಿ ಶೇ 1ಕ್ಕಿಂತಲೂ ಹೆಚ್ಚಿನ ಏರಿಕೆ ಸಾಧ್ಯವಾಗಲಿದೆ’ ಎಂದು ಅವರು ಹೇಳಿದರು.

ADVERTISEMENT

‘ವ್ಯಾಪಾರ ಸಮನ್ವಯತೆಯ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಅಮೆರಿಕ, ಯುರೋಪ್‌ ಮತ್ತು ಇಂಗ್ಲೆಂಡ್‌ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದವನ್ನು ಆದಷ್ಟೂ ಬೇಗನೆ ಪೂರ್ಣಗೊಳಿಸಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉದ್ಯಮಗಳಿಗೆ ಭರವಸೆ: ‘ಅಗತ್ಯ ಬಿದ್ದಾಗ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಆರ್‌ಬಿಐ ಹಿಂಜರಿಯುವುದಿಲ್ಲ. ಬಹಳ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ’ ಎಂದು ಉದ್ಯಮಗಳಿಗೆ ಭರವಸೆ ನೀಡಿದ್ದಾರೆ.

‘ಆರ್‌ಬಿಐ ತೆಗೆದುಕೊಂಡಿರುವ ಹಲವು ಕ್ರಮಗಳಿಂದಾಗಿ ಕಾರ್ಪೊರೇಟ್‌ ಬಾಂಡ್ ಮಾರುಕಟ್ಟೆಯು ಚೇತರಿಸಿಕೊಂಡಿದೆ. ಕಾರ್ಪೊರೇಟ್‌ ಬಾಂಡ್‌ ನೀಡಿಕೆಯು ಮೊದಲ ತ್ರೈಮಾಸಿಕದಲ್ಲಿಯೇ ₹ 1 ಲಕ್ಷ ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಗರಿಷ್ಠ ಮಟ್ಟದಲ್ಲಿದೆ.

‘ಸವಾಲುಗಳನ್ನು ಎದುರಿಸಲು ಮುಂಚಿತವಾಗಿಯೇ ಬಂಡವಾಳ ಸಂಗ್ರಹಿಸುವಂತೆ ಬ್ಯಾಂಕ್‌ಗಳಿಗೆ ಸಲಹೆ ನೀಡಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.