ADVERTISEMENT

ಎಲ್‌ಐಸಿ ಪಾಲಿಸಿದಾರರ ಹಿತರಕ್ಷಣೆ: ಹಣಕಾಸು ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಭರವಸೆ

ಪಿಟಿಐ
Published 3 ಫೆಬ್ರುವರಿ 2020, 19:30 IST
Last Updated 3 ಫೆಬ್ರುವರಿ 2020, 19:30 IST
ಎಲ್‌ಐಸಿ
ಎಲ್‌ಐಸಿ   

ನವದೆಹಲಿ: ಮುಂದಿನ ಹಣಕಾಸು ವರ್ಷದಲ್ಲಿ ಷೇರುಪೇಟೆಯಲ್ಲಿ ವಹಿವಾಟು ನಡೆಸಲಿರುವ ಸರ್ಕಾರಿ ಸ್ವಾಮ್ಯದ ದೈತ್ಯ ವಿಮೆ ಸಂಸ್ಥೆಯಾಗಿರುವ ಭಾರತೀಯ ಜೀವವಿಮೆ ನಿಗಮದ (ಎಲ್ಐಸಿ) ಪಾಲಿಸಿದಾರರ ಹಿತಾಸಕ್ತಿ ರಕ್ಷಿಸಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.

‘ಷೇರುಪೇಟೆಯಲ್ಲಿ ವಹಿವಾಟು ನಡೆಸಲು ಅವಕಾಶ ಮಾಡಿಕೊಡುವುದರಿಂದ ಆರಂಭಿಕ ಸಾರ್ವಜನಿಕ ನೀಡಿಕೆಯಲ್ಲಿ (ಐಪಿಒ) ಸಾರ್ವಜನಿಕರೂ ಭಾಗಿಯಾಗಲಿದ್ದಾರೆ. ಇದರಿಂದ ನಿಗಮದ ವಹಿವಾಟಿನಲ್ಲಿ ಪಾರದರ್ಶಕತೆ ಹೆಚ್ಚಲಿದೆ. ಷೇರು ಮಾರುಕಟ್ಟೆಯ ವಹಿವಾಟು ಕೂಡ ವೃದ್ಧಿಸಲಿದೆ’ ಎಂದು ಹಣಕಾಸು ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಹೇಳಿದ್ದಾರೆ.

‘ಷೇರುಪೇಟೆಯಲ್ಲಿ ಎಲ್‌ಐಸಿ ವಹಿವಾಟು ನಡೆಸಬೇಕು ಎನ್ನುವುದು ಸರ್ಕಾರದ ಹೊಸ ಚಿಂತನೆಯಾಗಿದೆ. ಶೀಘ್ರದಲ್ಲಿಯೇ ವಿವರಗಳನ್ನು ಪ್ರಕಟಿಸಲಾಗುವುದು. ನಿಗಮ ಮತ್ತು ಅದರ ಪಾಲಿಸಿದಾರರ ಹಿತಾಸಕ್ತಿ ರಕ್ಷಿಸಲು ಆದ್ಯತೆ ನೀಡಲಾಗುವುದು’ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ADVERTISEMENT

‘ಎಷ್ಟು ಪ್ರಮಾಣದಲ್ಲಿ ಸರ್ಕಾರದ ಪಾಲು ಬಂಡವಾಳ ಮಾರಾಟ ಮಾಡಲಾಗುವುದು ಎನ್ನುವುದು ಎಲ್‌ಐಸಿ ಕಾಯ್ದೆಗೆ ತಿದ್ದುಪಡಿ ತಂದ ನಂತರವೇ ಸ್ಪಷ್ಟ ಚಿತ್ರಣ ದೊರೆಯಲಿದೆ. ಸದ್ಯಕ್ಕೆ ಯಾವ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಬೇಕು ಎನ್ನುವುದನ್ನು ಎಲ್‌ಐಸಿಯು ಸ್ವತಂತ್ರವಾಗಿ ನಿರ್ಧರಿಸುತ್ತಿದೆ. ಖಾಸಗೀಕರಣದ ನಂತರ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದು ಆಮೇಲೆ ತಿಳಿದು ಬರಲಿದೆ.

‘2020–21ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ನಮೂದಿಸಿರುವ ಅಂಕಿ ಅಂಶಗಳು ವಾಸ್ತವತೆಯಿಂದ ಕೂಡಿವೆ. ವರಮಾನ ಸಂಗ್ರಹ ಮತ್ತು ವೆಚ್ಚಕ್ಕೆ ನಿಗದಿಪಡಿಸಿರುವ ಗುರಿಗಳು ಖಂಡಿತವಾಗಿಯೂ ಈಡೇರಲಿವೆ’ ಎಂದೂ ಠಾಕೂರ್‌ ಹೇಳಿದ್ದಾರೆ.

* ₹ 2.10 ಲಕ್ಷ ಕೋಟಿ: ಒಟ್ಟಾರೆ ಷೇರು ವಿಕ್ರಯದಿಂದ ಸಂಗ್ರಹಿಸಲಿರುವ ಮೊತ್ತ

* ₹ 90 ಸಾವಿರ ಕೋಟಿ: ಎಲ್‌ಐಸಿ ಮತ್ತು ಐಡಿಬಿಐ ಬ್ಯಾಂಕ್‌ ಷೇರು ವಿಕ್ರಯದಿಂದ ಸಂಗ್ರಹಿಸಲು ಉದ್ದೇಶಿಸಿರುವ ಮೊತ್ತ

* 100 %: ಎಲ್‌ಐಸಿನಲ್ಲಿ ಇರುವ ಸರ್ಕಾರದ ಪಾಲು ಬಂಡವಾಳ

* 46.5 %: ಐಡಿಬಿಐ ಬ್ಯಾಂಕ್‌ನಲ್ಲಿ ಇರುವ ಸರ್ಕಾರದ ಪಾಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.