ADVERTISEMENT

ಹೂಡಿಕೆದಾರರಿಗೆ ಆರು ದಿನಗಳಲ್ಲಿ ₹18 ಲಕ್ಷ ಕೋಟಿ ನಷ್ಟ

ಪಿಟಿಐ
Published 17 ಜೂನ್ 2022, 20:16 IST
Last Updated 17 ಜೂನ್ 2022, 20:16 IST
   

ನವದೆಹಲಿ: ದೇಶದ ಷೇರುಪೇಟೆ ಸೂಚ್ಯಂಕಗಳು ಕುಸಿದ ಪರಿಣಾಮವಾಗಿ, ಆರು ದಿನಗಳ ಅವಧಿಯಲ್ಲಿ ಹೂಡಿಕೆದಾರರು ₹18.17 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಿಸುತ್ತಿರುವ ಕಾರಣ, ಜಾಗತಿಕ ಮಟ್ಟದಲ್ಲಿ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆದಿದೆ.

ಆರು ದಿನಗಳ ಅವಧಿಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ 3,959 ಅಂಶ ಇಳಿದಿದೆ. ‘ಜಾಗತಿಕವಾಗಿ ಮತ್ತು ದೇಶಿ ಮಾರುಕಟ್ಟೆಗಳಲ್ಲಿ ಕಳೆದು ಕೆಲವು ವಹಿವಾಟು ದಿನಗಳಲ್ಲಿ ಭಾರಿ ಕುಸಿತ ದಾಖಲಾಗಿದೆ. ವಿದೇಶಿ ಹೂಡಿಕೆ ಹೊರಹೋಗುತ್ತಿರುವುದು ಕೂಡ ಹೂಡಿಕೆದಾರರ ವಿಶ್ವಾಸವನ್ನು ಕುಂದಿಸಿದೆ’ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಣ್ಣ ಹೂಡಿಕೆಗಳ ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕ ಹೇಳಿದ್ದಾರೆ.

‘ಜಾಗತಿಕವಾಗಿ ಹಣಕಾಸಿನ ನೀತಿ ಬಿಗಿಗೊಳ್ಳುತ್ತಿರುವುದು ಮತ್ತು ಇದರಿಂದಾಗಿ ಆರ್ಥಿಕ ಬೆಳವಣಿಗೆ ಕಡಿಮೆ ಆಗಬಹುದು ಎಂಬ ಭೀತಿಯು ಜಗತ್ತಿನ ಎಲ್ಲೆಡೆ ಷೇರು ಮಾರುಕಟ್ಟೆಗಳಲ್ಲಿ ಇದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ADVERTISEMENT

ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 135 ಅಂಶ ಇಳಿಕೆ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 67 ಅಂಶ ಕುಸಿದಿದೆ.

‘ವಿದೇಶಿ ಹೂಡಿಕೆ ಹೊರಹೋಗುವುದು ಕಡಿಮೆ ಆಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಕೋಟಕ್ ಸೆಕ್ಯುರಿಟೀಸ್‌ನ ತಾಂತ್ರಿಕ ಸಂಶೋಧನಾ ವಿಭಾಗದ ಡೆಪ್ಯುಟಿ ಉಪಾಧ್ಯಕ್ಷ ಅಮೋಲ್ ಅಠವಳೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.