ADVERTISEMENT

ಕನ್ನ ಹಾಕುವವರ ಕೈಯಲ್ಲಿಪ್ರಬಲ ಅಸ್ತ್ರ

ಪೃಥ್ವಿರಾಜ್ ಎಂ ಎಚ್
Published 15 ಜನವರಿ 2019, 19:30 IST
Last Updated 15 ಜನವರಿ 2019, 19:30 IST
ಐಪಿ ಫೋನ್‌
ಐಪಿ ಫೋನ್‌   

ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಹಣ ದೋಚುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಂತ್ರಜ್ಞಾನವನ್ನೇ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಂಡು ಈ ವಂಚನೆ ಎಸಗಲಾಗುತ್ತಿದೆ. ತಂತ್ರಜ್ಞಾನ ಅಭಿವೃದ್ಧಿಯಾದಂತೆಲ್ಲಾ ಅದನ್ನು ದುರುಪಯೋಗ ಮಾಡಿಕೊಳ್ಳುವ ಹೊಸ ಹೊಸ ಮಾರ್ಗಗಳನ್ನೇ ಸೈಬರ್ ಕಳ್ಳರು ಹುಡುಕುತ್ತಿರುತ್ತಾರೆ.

ವ್ಯಕ್ತಿಗಳ ಬ್ಯಾಂಕ್‌ ಖಾತೆ ಮತ್ತು ಸ್ಮಾರ್ಟ್‌ಫೋನ್‌ಗಳನ್ನೇ ಗುರಿಯಾಗಿಸಿಕೊಂಡು ‘ಇ–ಕಳ್ಳರು’ ದಾಳಿ ಮಾಡುತ್ತಿದ್ದಾರೆ. ಸೈಬರ್‌ ಪೊಲೀಸರ ಕೈಗೆ ಸಿಗದಂತೆ ಜಾರಿಕೊಳ್ಳಲು ಸುಧಾರಿತ ತಂತ್ರಜ್ಞಾನ ಒಳಗೊಂಡಿರುವ ಐಪಿ (ಇಂಟರ್‌ನೆಟ್‌ ಪ್ರೋಟೊಕಾಲ್‌) ಫೋನ್‌ ಎಂಬ ಪ್ರಬಲ ಅಸ್ತ್ರವನ್ನು ಅವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಮಾರ್ಗ ಅವರಿಗೆ ಸಿಕ್ಕಿದೆ.

ಸೌರ ವಿದ್ಯುತ್ ಯೋಜನೆ ಹೆಸರಿನಲ್ಲಿ ದೇಶದಾದ್ಯಂತ ಹಲವು ಉದ್ಯಮಿಗಳಿಗೆ ಮಸಿ ಬಳಿದು ₹200 ಕೋಟಿವರೆಗೆ ವಂಚಿಸಿರುವ ಬಾಬ್‌ ಆಗಸ್ಟಿನ್‌ ಈ ಐಪಿ ಫೋನ್‌ ಮೂಲಕವೇ ಕರೆ ಮಾಡಿದ್ದಾನೆ. ಕೆಲವು ದಿನಗಳಿಂದ ಪೊಲೀಸರನ್ನು ಅಸಭ್ಯ ಪದ ಬಳಸಿ ದೂಷಿಸುತ್ತಿರುವ ಅಲ್‌ ಮನ್ಸೂರ್‌ ಎಂಬ ಕಿಡಿಗೇಡಿ ಕೂಡ ಇಂಥಹುದೇ ಫೋನ್ ಮೂಲಕ ಕರೆ ಮಾಡಿದ್ದಾನೆ ಎಂಬುದು ದೃಢಪಟ್ಟಿದೆ.

ADVERTISEMENT

ಏನಿದರ ವಿಶೇಷ?

ಸಾಮಾನ್ಯವಾಗಿ ಇತರರು ಕರೆ ಮಾಡಿದರೆ, 10 ಅಂಕಿಗಳ ಸಂಖ್ಯೆ ಕಾಣಿಸುತ್ತದೆ. ಇನ್ನೂ ಕೆಲವರು ಕೆಲವು ಆ್ಯಪ್‌ಗಳನ್ನು ಬಳಸಿ ‘ಪ್ರೈವೇಟ್‌ ನಂಬರ್‌’ ಎಂದು ಪರದೆ ಮೇಲೆ ಮೂಡುವಂತೆ ಮಾಡಿ ಕರೆ ಮಾಡುತ್ತಿದ್ದಾರೆ. ಇದನ್ನು ಭೇದಿಸುವುದು ಕಷ್ಟದ ಕೆಲಸವೇನಲ್ಲ ಎಂದು ಗೊತ್ತಾದ ಮೇಲೆ ಈ ಐಪಿ ಫೋನ್‌ ಮೂಲಕ ಕರೆ ಮಾಡುವ ಮಾರ್ಗ ಕಂಡುಕೊಂಡಿದ್ದಾರೆ.

ಈ ಫೋನ್‌ನಿಂದ ಕರೆ ಮಾಡಿದರೆ, ಕರೆ ಮಾಡಿದವರ ಜಾಡು ಹಿಡಿಯುವುದು ಕಷ್ಟ. ಪರದೆ ಮೇಲೆ ಕೇವಲ ನಾಲ್ಕೇ ಅಂಕಿಗಳು ಮೂಡುವುದೇ ಇದಕ್ಕೆ ಕಾರಣ.

ಕಂಪ್ಯೂಟರ್‌ಗೆ ಇರುವಂತಹ ಅಂತರ್ಜಾಲ ವಿಳಾಸದ (ಐಪಿ ಅಡ್ರೆಸ್‌) ಮೂಲಕ ಸೈಬರ್ ಕಳ್ಳರು ಇಂಟರ್‌ನೆಟ್ ಪ್ರೋಟೊಕಾಲ್ ಫೋನ್ ಬಳಸುತ್ತಾರೆ. ಲ್ಯಾಂಡ್‌ಲೈನ್‌ ಫೋನ್‌ ಹೋಲುವ ಈ ಫೋನ್‌ ಅನ್ನು ಐಪಿ ಅಡ್ರೆಸ್‌ಗೆ ಜೋಡಿಸುತ್ತಾರೆ. ಇದರಿಂದ ದೇಶ, ವಿದೇಶಗಳಿಗೆ ಸುಲಭವಾಗಿ ಕರೆ ಮಾಡಬಹುದು.

ಈ ಫೋನ್‌ ಮೂಲಕ ಕರೆ ಬಂದರೆ, ಸಿಗ್ನಲ್‌ ಪಡೆಯುವ ಸೆಲ್‌ಫೋನ್ ಟವರ್‌ ಇರುವಂತಹ ಪ್ರದೇಶ, ಕರೆ ಮಾಡಿದ ವ್ಯಕ್ತಿ ಇರುವಂತಹ ಸ್ಥಳ ಪತ್ತೆ ಮಾಡುವುದು ಕಷ್ಟ.

ಸಾಮಾನ್ಯವಾಗಿ ನಾಲ್ಕು ಅಂಕಿಗಳ ಸಂಖ್ಯೆಯ ಕರೆ ಬಂದರೆ, ವಿದೇಶಗಳಿಂದ ಕರೆ ಬಂದಿರಬಹುದು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಐಪಿ ಫೋನ್‌ನಿಂದ ಕರೆ ಮಾಡಿದರೆ ಮೂಡುವ ನಾಲ್ಕು ಅಂಕಿಗಳು, ಅಮೆರಿಕ, ಯುರೋಪ್‌ ರಾಷ್ಟ್ರಗಳ ಐಎಸ್‌ಡಿ ಸಂಖ್ಯೆಗಳಂತೆಯೂ ಕಾಣಿಸದಿರುವುದು ವಿಶೇಷ. ಫೋನ್‌ಗೆ ಸಂಪರ್ಕ ಕಲ್ಪಿಸುವ ನೆಟ್‌ವರ್ಕ್‌ ಪ್ರೊವೈಡರ್‌ ಸಂಸ್ಥೆಗಳಿಗೂ ಈ ಮಾಹಿತಿ ಸಿಗುವುದಿಲ್ಲ.

ಈ ಐಪಿ ಫೋನ್‌ ಬಳಕೆ ಕೆಲವು ವರ್ಷಗಳಿಂದ ಆರಂಭವಾಗಿದೆ. ಅಮೆರಿಕ, ಯುರೋಪ್ ದೇಶಗಳ ಕೆಲವು ಬಹುರಾಷ್ಟ್ರೀಯ ಕಂಪನಿಗಳು, ತಮ್ಮ ಕಾಲ್‌ಸೆಂಟರ್‌ಗಳನ್ನು ಬೆಂಗಳೂರು, ಹೈದರಾಬಾದ್‌, ಚೆನ್ನೈ, ಮುಂಬೈ, ದೆಹಲಿ ನಗರಗಳಲ್ಲಿ ಆರಂಭಿಸಿವೆ. ಈ ಮೂಲಕ ತಮ್ಮ ಗ್ರಾಹಕರಿಗೆ ಇಲ್ಲಿಂದಲೇ ಸೇವೆ ಒದಗಿಸುತ್ತಿವೆ. ಇದಕ್ಕಾಗಿ ಈ ಕಂಪನಿಗಳು ಐಪಿ ಫೋನ್‌ಗಳನ್ನು ಬಳಸುತ್ತಿವೆ.

ಕಾನೂನು ವ್ಯಾಪ್ತಿಯಲ್ಲಿ ಇವುಗಳನ್ನು ಬಳಸಲು ಭಾರತ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಇಲ್ಲಿರುವ ಸರ್ಕಾರಿ ಮತ್ತು ಖಾಸಗಿ ನೆಟ್‌ವರ್ಕ್‌ ಪ್ರೊವೈಡರ್ ಸಂಸ್ಥೆಗಳು ಐಪಿ ಫೋನ್ ಬಳಕೆಗೆ ನೆಟ್‌ವರ್ಕ್‌ ಸೇವೆ ಒದಗಿಸುತ್ತಿವೆ. ಆದರೆ ಇದನ್ನೇ ಸಮಾಜ ವಿರೋಧಿ ಕೆಲಸಗಳಿಗೆ ಬಳಸಲಾಗುತ್ತಿದೆ.

ಹೇಗೆ ದೋಚುತ್ತಾರೆ?

ಐಪಿ ಫೋನ್‌ನಿಂದ ಕರೆ ಬಂದಾಗ ಸ್ವೀಕರಿಸಿದರೆ, ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿರುವ ಬ್ಯಾಂಕಿಂಗ್ ಕಿರು ತಂತ್ರಾಂಶಗಳು, ವಾಲೆಟ್‌ಗಳನ್ನು ತಮ್ಮ ನಿಯಂತ್ರಣಕ್ಕೆ ಪಡೆಯಲು ಕಳ್ಳರಿಗೆ ದಾರಿ ಸಿಗುತ್ತದೆ. ಒಂದು ನಿಮಿಷ ಕರೆ ಚಾಲನೆಯಲ್ಲಿದ್ದರೂ ಸಾಕು, ಸುಲಭವಾಗಿ ಕನ್ನ ಹಾಕಬಹುದು.

ಬಹುತೇಕರು ಇದನ್ನು ಹಣ ದೋಚುವುದಕ್ಕಿಂತ ಹೆಚ್ಚಾಗಿ ಕೆಲವರನ್ನೇ ಗುರಿಯಾಗಿಸಿಕೊಂಡು, ದೂಷಿಸಲು, ಜೀವ ಬೆದರಿಕೆ ಹಾಕಲು ಬಳಸುತ್ತಿದ್ದಾರೆ. ಈಚೆಗಷ್ಟೇ ತೆಲಂಗಾಣದ ಬಿಜೆಪಿ ನಾಯಕರಿಗೆ ಐಪಿ ಫೋನ್‌ ಮೂಲಕ ಕರೆ ಮಾಡಿರುವ ಕಿಡಿಗೇಡಿಗಳು, ಸಭೆಗಳಲ್ಲಿ ನಿರ್ದಿಷ್ಟ ಅಂಶದ ಮೇಲೆ ಮಾತನಾಡಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಕೋಮು ದ್ವೇಷ ಸೃಷ್ಟಿಸುವುದು, ಸಮಾಜದಲ್ಲಿ ಶಾಂತಿ ಕದಡುವುದಕ್ಕೆ ಈ ಐಪಿ ಫೋನ್ ಎಂಬ ಅಸ್ತ್ರವನ್ನು ಬಳಸುತ್ತಿದ್ದಾರೆ. ಇವರನ್ನು ಪತ್ತೆ ಮಾಡುವುದು ಕಷ್ಟ ಎಂದು ಪೊಲೀಸರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಅಪರಿಚಿತ ಸಂಖ್ಯೆಗಳಿಂದ ಕರೆ ಬಂದರೆ ಸ್ವೀಕರಿಸದೇ ಇರುವುದೊಂದೇ ಸದ್ಯಕ್ಕಿರುವ ಪರಿಹಾರ. ಇಲ್ಲದಿದ್ದರೆ ಕಿಸೆಗೆ ಕನ್ನ ಬಿದ್ದು,
ಕೈ ಸುಟ್ಟುಕೊಳ್ಳುವುದು ಅನಿವಾರ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.