ಆ್ಯಪಲ್ ಐಫೋನ್ 17 ಪ್ರೊ ಮ್ಯಾಕ್ಸ್
ನವದೆಹಲಿ: ಆ್ಯಪಲ್ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಐಫೋನ್‌ನ 17 ಪ್ರೊ ಮ್ಯಾಕ್ಸ್‌ನ ಕಾಸ್ಮಿಕ್ ಆರೆಂಜ್ ಬಣ್ಣದ ಸ್ಮಾರ್ಟ್‌ಫೋನ್ ಬಿಡುಗಡೆಗೊಂಡ ಕೆಲವೇ ಕ್ಷಣಗಳಲ್ಲಿ ದಾಸ್ತಾನು ಖಾಲಿಯಾಗಿದೆ.
ಸೆ. 9ರಂದು ನಡೆದ ಆ್ಯಪಲ್ ಈವೆಂಟ್‌ನಲ್ಲಿ ಹೊಸ ಮಾದರಿ ‘17 ಸರಣಿ’ಯ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿ ಬಿಡುಗಡೆ ಮಾಡಿತ್ತು. ಇವುಗಳನ್ನು ಮುಂಗಡವಾಗಿ ಕಾಯ್ದಿರಿಸುವ ಅವಕಾಶವನ್ನು ಕಂಪನಿ ಕಲ್ಪಿಸಿತ್ತು. ಅಮೆರಿಕ ಮತ್ತು ಭಾರತಕ್ಕೆ ಮೀಸಲಿರುವ ಕಂಪನಿಯ ಅಧಿಕೃತ ಅಂತರ್ಜಾಲ ತಾಣದಲ್ಲಿ ಮುಂಗಡವಾಗಿ ಕಾಯ್ದಿರಿಸಲು ಆಸಕ್ತರು ಮುಗಿಬಿದ್ದಿದ್ದರಿಂದ, ದಾಸ್ತಾನು ಖಾಲಿಯಾಗಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಐಫೋನ್ ಪ್ರೊ ಮ್ಯಾಕ್ಸ್ ಮತ್ತು ಐಫೋನ್ ಪ್ರೊ ಸರಣಿಯ ಕಾಸ್ಮಿಕ್ ಆರೆಂಜ್ ಫೋನ್‌ಗಳನ್ನು ಆ್ಯಪಲ್ ಮಳಿಗೆಯಿಂದ ಪಡೆಯಲು ಅವಕಾಶ ಕಲ್ಪಿಸುವಂತೆ ಮುಂಗಡ ಕಾಯ್ದರಿಸುವಿಕೆಗೆ ಅವಕಾಶ ಇರಲಿಲ್ಲ.
‘ಇದನ್ನು ತಿಳಿಸಲು ನಮಗೆ ಅತೀವ ನೋವಾಗುತ್ತಿದೆ. ಅತಿ ಹೆಚ್ಚು ಜನರಿಂದ ಮುಂಗಡ ಬುಕ್ಕಿಂಗ್ ಆಗಿದ್ದರ ಪರಿಣಾಮ ಐಫೋನ್ 17 ಪ್ರೊ ಮ್ಯಾಕ್ಸ್‌ನ ಕಾಸ್ಮಿಕ್ ಆರೆಂಜ್ ಸ್ಮಾರ್ಟ್‌ಫೋನ್ ಅತಿ ಬೇಗ ಖರ್ಚಾಗಿದೆ. ಹೀಗಾಗಿ ಇದು ಯಾವುದೇ ಸ್ಟೋರೇಜ್ ಆಯ್ಕೆಗಳಲ್ಲೂ ಲಭ್ಯವಿಲ್ಲ. ಆದರೆ ಕೆಲವೊಂದು ಮಳಿಗೆಗಳಲ್ಲಿ ಡೀಪ್ ಬ್ಲೂ ಬಣ್ಣದ ಫೋನ್‌ಗಳು ಲಭ್ಯ ಇವೆ. ಗ್ರಾಹಕರ ಅಪೇಕ್ಷೆಯಂತೆ ಕಿತ್ತಳೆ ಬಣ್ಣದ ಫೋನ್ ಅನ್ನು ಮತ್ತಷ್ಟು ಲಭ್ಯವಾಗುವಂತೆ ನಮ್ಮ ತಂಡ ನಿರಂತರವಾಗಿ ಕೆಲಸ ಮಾಡುತ್ತಿದೆ’ ಎಂದು ಆ್ಯಪಲ್ ತಜ್ಞರೊಬ್ಬರು ತಿಳಿಸಿದ್ದಾರೆ.
ಐಫೋನ್ 17 ಸರಣಿಯ ಸ್ಮಾರ್ಟ್‌ಫೋನ್ ₹82,900ರಿಂದ ₹2.29 ಲಕ್ಷವರೆಗೆ ಲಭ್ಯ. ಸೆ. 19ರಿಂದ ಭಾರತದಲ್ಲಿ ಈ ಹೊಸ ಸರಣಿಯ ಫೋನ್‌ಗಳು ಲಭ್ಯ ಎಂದು ಕಂಪನಿ ಈ ಮೊದಲು ಹೇಳಿತ್ತು.
‘ಕೆಲ ಮಳಿಗೆಗಳಲ್ಲಿ ಹೊಸ ಸರಣಿಯ ಐಫೋನ್‌ಗಳ ದಾಸ್ತಾನು ಕಡಿಮೆ ಇರುವುದ್ದು, ಮುಂಗಡವಾಗಿ ಕಾಯ್ದಿರಿಸದವರಿಗೆ ಮೊದಲು ಬಂದವರಿಗೆ ಫೋನ್ ಆದ್ಯತೆಯಂತೆ ನೀಡಲಾಗುತ್ತಿದೆ. ಸೆ. 12ರಿಂದ ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ದಾಸ್ತಾನು ಇಲ್ಲದಿದ್ದರೂ ಫೋನ್ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಅವರೆಲ್ಲರಿಗೂ ಅ. 7ರಿಂದ ಅವರ ವಿಳಾಸಕ್ಕೆ ಫೋನ್ ಕಳುಹಿಸಲಾಗುವುದು’ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
ತೈವಾನ್‌ನ ಫಾಕ್ಸ್‌ಕಾನ್ ಕಂಪನಿಯು ಚೀನಾ ಮತ್ತು ಭಾರತದಲ್ಲಿ ಆ್ಯಪಲ್‌ನ ನೂತನ ಸರಣಿಯ ಫೋನ್‌ಗಳನ್ನು ಉತ್ಪಾದಿಸುತ್ತಿದೆ. ಅಮೆರಿಕದಲ್ಲಿ ಈ ಫೋನ್‌ಗಳ ಬೆಲೆ ₹70,370ರಿಂದ ₹1.76 ಲಕ್ಷವರೆಗೆ ಲಭ್ಯ. ಬೆಂಗಳೂರು ಬಳಿ ಇರುವ ತಯಾರಿಕಾ ಘಕಟದಲ್ಲಿ ಸಿದ್ಧವಾಗುವ ಐಫೋನ್‌ಗಳು ಅಮೆರಿಕದ ಮಾರುಕಟ್ಟೆಗೆ ಪೂರೈಕೆಯಾಗುತ್ತಿವೆ.
ವಾರ್ಷಿಕ 6 ಕೋಟಿ ಐಫೋನ್‌ಗಳ ಉತ್ಪಾದನೆಗೆ ಆ್ಯಪಲ್ ತನ್ನ ಯೋಜನೆ ರೂಪಿಸಿದೆ. 2024–25ರಲ್ಲಿ 3.5ರಿಂದ 4 ಕೋಟಿಯಷ್ಟು ಐಫೋನ್ ಉತ್ಪಾದನೆಯಾಗಿತ್ತು. ಇದರಲ್ಲಿ ಶೇ 60ರಷ್ಟು ಭಾರತದಲ್ಲೇ ತಯಾರಾಗುತ್ತಿದ್ದು, ಇದರ ಒಟ್ಟು ವಹಿವಾಟು ₹1.93 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.