ADVERTISEMENT

ವರ್ಷಾಚರಣೆ ದಿನ ಅಡಚಣೆ ಎದುರಿಸಿದ ಐ.ಟಿ. ಪೋರ್ಟಲ್

ಪಿಟಿಐ
Published 7 ಜೂನ್ 2022, 12:50 IST
Last Updated 7 ಜೂನ್ 2022, 12:50 IST
ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌
ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌   

ನವದೆಹಲಿ: ಆದಾಯ ತೆರಿಗೆ ಇಲಾಖೆಯ, ತೆರಿಗೆ ವಿವರ ಸಲ್ಲಿಸುವ ಪೋರ್ಟಲ್‌ ಮಂಗಳವಾರ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತು. ಹೊಸ ಪೋರ್ಟಲ್‌ ಕಾರ್ಯ ಆರಂಭಿಸಿ ಮಂಗಳವಾರಕ್ಕೆ ಒಂದು ವರ್ಷ ಆಗಿದೆ. ಅದೇ ದಿನವೇ ಅಡಚಣೆಗಳು ಎದುರಾದವು.

ತೆರಿಗೆ ವಿವರ ಸಲ್ಲಿಸುವುದನ್ನು ಹಾಗೂ ತೆರಿಗೆ ಮರುಪಾವತಿ ಪಡೆಯುವುದನ್ನು ಈ ಪೋರ್ಟಲ್‌ ಇನ್ನಷ್ಟು ಸುಲಭಗೊಳಿಸಲಿದೆ ಎಂದು ಹೇಳಲಾಗಿತ್ತು. 2021ರ ಜೂನ್‌ 7ರಂದು ಈ ಪೋರ್ಟಲ್‌ ಚಾಲನೆ ಪಡೆದುಕೊಂಡಾಗಿನಿಂದ ಕೆಲವು ವಾರಗಳವರೆಗೆ ಅಡಚಣೆಗಳು ಎದುರಾಗುತ್ತಿದ್ದವು. ಈ ಪೋರ್ಟಲ್‌ಅನ್ನು ಇನ್ಫೊಸಿಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ.

ಮೊದಲ ವರ್ಷಾಚರಣೆ ಸಂದರ್ಭದಲ್ಲಿಯೇ ಅಡಚಣೆಗಳು ಎದುರಾಗಿದ್ದನ್ನು ಗಮನಿಸಿದ ಕೆಲವರು ಪೋರ್ಟಲ್‌ಅನ್ನು ಹ್ಯಾಕ್ ಮಾಡಲಾಗಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಪೋರ್ಟಲ್‌ನಲ್ಲಿ ಲಾಗಿನ್ ಆಗಲು ಕೆಲವರಿಗೆ ಸಾಧ್ಯವಾಗಲಿಲ್ಲ, ಇನ್ನು ಕೆಲವರಿಗೆ ಅಗತ್ಯ ವಿವರ ಹುಡುಕಲು ಆಗುತ್ತಿರಲಿಲ್ಲ.

ADVERTISEMENT

ಸಮಸ್ಯೆಗಳ ಬಗ್ಗೆ ಗಮನ ನೀಡುವಂತೆ ಇನ್ಫೊಸಿಸ್ ಕಂಪನಿಗೆ ಸೂಚಿಸಲಾಗಿದೆ. ಕಂಪನಿಯು ಆದ್ಯತೆಯ ಮೇರೆಗೆ ಈ ಕೆಲಸ ನಿರ್ವಹಿಸುತ್ತಿರುವುದಾಗಿ ಖಚಿತಪಡಿಸಿದೆ ಎಂದು ಆದಾಯ ತೆರಿಗೆ ಇಲಾಖೆಯು ಟ್ವೀಟ್ ಮಾಡಿದೆ. ಪೋರ್ಟಲ್‌ನ ಮಾಹಿತಿ ಸೋರಿಕೆ ಆಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.