ADVERTISEMENT

ರಾಷ್ಟ್ರಪತಿ, ಪ್ರಧಾನಿಗೆ ಸಿಬ್ಬಂದಿ ಮೊರೆ

ವೇತನ ಬಾಕಿ ಪಾವತಿ, ತುರ್ತು ನಿಧಿ ಕೋರಿ ಜೆಟ್‌ ಏರ್‌ವೇಸ್‌ ನೌಕರರಿಂದ ಪತ್ರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 19:32 IST
Last Updated 20 ಏಪ್ರಿಲ್ 2019, 19:32 IST
   

ನವದೆಹಲಿ:ವೇತನ ಬಾಕಿ ಮತ್ತು ತುರ್ತು ನಿಧಿ ಲಭ್ಯವಾಗುವಂತೆ ಮಾಡಲು ಮಧ್ಯಪ್ರವೇಶಿಸುವಂತೆಜೆಟ್‌ ಏರ್‌ವೇಸ್‌ ಸಂಸ್ಥೆಯ ಸಿಬ್ಬಂದಿರಾಷ್ಟ್ರಪತಿ ಮತ್ತು ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಸಂಸ್ಥೆಯಲ್ಲಿ ಸುಮಾರು 23 ಸಾವಿರ ಸಿಬ್ಬಂದಿ ಇದ್ದು, ಪೈಲಟ್‌ಗಳನ್ನೂ ಒಳಗೊಂಡು ಸಿಬ್ಬಂದಿಗೆ ವೇತನ ಪಾವತಿಸುವಲ್ಲಿ ಜೆಟ್‌ ಏರ್‌ವೇಸ್‌ ವಿಳಂಬ ಮಾಡುತ್ತಿದೆ. ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಸೇವೆಯನ್ನು ಮತ್ತೆ ಆರಂಭಿಸಲು ಬ್ಯಾಂಕ್‌ಗಳ ಒಕ್ಕೂಟ ತುರ್ತು ನಿಧಿಯ ನೀಡಲು ನಿರಾಕರಿಸಿವೆ.

ಹೀಗಾಗಿ ಸಂಸ್ಥೆಯ ಸಿಬ್ಬಂದಿಯ ಎರಡು ಒಕ್ಕೂಟಗಳಾದ ಸೊಸೈಟಿ ಫಾರ್‌ ವೆಲ್‌ಫೇರ್‌ ಆಫ್‌ ಇಂಡಿಯನ್‌ ಪೈಲಟ್ಸ್‌ (ಎಸ್‌ಡಬ್ಲ್ಯುಐಪಿ) ಮತ್ತು ಜೆಟ್‌ ಏರ್‌ಕ್ರಾಫ್ಟ್‌ ಮೇಂಟೆನನ್ಸ್‌ ಎಂಜಿನಿಯರ್ಸ್‌ ವೆಲ್‌ಫೇರ್‌ ಅಸೋಸಿಯೇಷನ್ (ಜೆಎಎಂಇಡಬ್ಲ್ಯುಎ) ವೇತನ ಬಾಕಿ ಕೊಡಿಸುವಂತೆ ರಾಷ್ಟ್ರಪತಿ ರಾಮ ನಾಥ ಕೋವಿಂದ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿವೆ.

ADVERTISEMENT

ಎಸ್‌ಡಬ್ಲ್ಯುಐಪಿ 1,200 ಸದಸ್ಯರನ್ನು ಹೊಂದಿದ್ದರೆ,ಜೆಎಎಂಇಡಬ್ಲ್ಯುಎ 500 ಸದಸ್ಯರನ್ನು ಪ್ರತಿನಿಧಿಸುತ್ತಿದೆ.

ತಕ್ಷಣದ ಕ್ರಮ ಅಗತ್ಯ:‘ಆದಷ್ಟೂ ಶೀಘ್ರವೇ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ,ಬಾಕಿ ವೇತನ ಪಾವತಿಸುವಂತೆ ಜೆಟ್‌ ಏರ್‌ವೇಸ್‌ (ಇಂಡಿಯಾ) ಲಿಮಿಟೆಡ್‌ನ ವ್ಯವಸ್ಥಾಪಕ ಮಂಡಳಿಗೆ ನಿರ್ದೇಶನ ನೀಡಿ’ ಎಂದು ಪತ್ರದಲ್ಲಿ ಮನವಿ ಮಾಡಿವೆ.

‘ಈ ಕಠಿಣ ಪರಿಸ್ಥಿತಿಯಲ್ಲಿ ಪ್ರತಿಯೊಂದು ನಿಮಿಷ ಮತ್ತು ಪ್ರತಿಯೊಂದು ನಿರ್ಧಾರ ಮಹತ್ವದ್ದಾಗಿರುತ್ತದೆ. ಹೀಗಾಗಿ ಸಂಸ್ಥೆಯ ಕಾರ್ಯಾಚರಣೆಗೆ ಅಗತ್ಯವಿರುವ ತುರ್ತು ನಿಧಿ ಲಭ್ಯವಾಗುವಂತೆಯೂ ಕೇಳಿಕೊಳ್ಳುತ್ತಿದ್ದೇವೆ.

‘ಸಂಸ್ಥೆಯ ಗುಣಮಟ್ಟ ಕಾಯ್ದುಕೊಳ್ಳಲು ಮತ್ತು ಸುರಕ್ಷತೆಗಾಗಿ ಸಿಬ್ಬಂದಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಆದರೆ, ಬಾಕಿ ವೇತನ ಪಾವತಿಸುವ ಯಾವುದೇ ಭರವಸೆ ಇಲ್ಲ. ಹೀಗಾಗಿ ಈ ಬಿಕ್ಕಟ್ಟನ್ನು ನಿಮ್ಮ ಮಾರ್ಗದರ್ಶನದಡಿ ಬಗೆಹರಿಸುವಂತೆ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇವೆ.ಸಂಪೂರ್ಣ ವ್ಯವಸ್ಥೆಯ ಪುನಶ್ಚೇತನಕ್ಕೆ ತಕ್ಷಣದ ಕ್ರಮ ಅಗತ್ಯವಿದೆ’ ಎಂದಿದ್ದಾರೆ.

ಪೈಲಟ್‌ಗಳು ಮತ್ತು ಎಂಜಿನಿಯರ್‌ಗಳಿಗೆಜನವರಿ, ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳ ವೇತನ ಬಾಕಿ ಇದ್ದು, ಎಲ್ಲಾ ಸಿಬ್ಬಂದಿವರ್ಗದವರಿಗೆ ಒಂದು ತಿಂಗಳ ವೇತನ ಬಾಕಿ ಇದೆ. ಎಂದು ಜೆಟ್‌ ಏರ್‌ವೇಸ್‌ನ ವ್ಯವಸ್ಥಾಪಕ ಮಂಡಳಿ ಡಿಸೆಂಬರ್‌ 2018ರ ಡಿಸೆಂಬರ್‌ 7ರ ಮೇಲ್‌ನಲ್ಲಿ ತಿಳಿಸಿತ್ತು.

ಸಿಬ್ಬಂದಿಯ ಭವಿಷ್ಯದ ಹಿತ ದೃಷ್ಟಿಯಿಂದಸಂಸ್ಥೆಯನ್ನು ಸರ್ಕಾರದ ಸುಪರ್ದಿಗೆ ಪಡೆಯುವಂತೆ ಬ್ಯಾಂಕ್‌ ಒಕ್ಕೂಟಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆಶುಕ್ರವಾರವೇ ಮನವಿ ಪತ್ರ ಕಳುಹಿಸಿವೆ.

ಕೆಲಸ ನೀಡಿದಸ್ಪೈಸ್‌ ಜೆಟ್‌
ಜೆಟ್‌ ಏರ್‌ವೇಸ್‌ನಲ್ಲಿ ಕೆಲಸ ಕಳೆದುಕೊಳ್ಳುತ್ತಿರುವವರಿಗೆ ಸ್ಪೈಸ್‌ ಜೆಟ್‌ ಸಂಸ್ಥೆಯು ಆದ್ಯತೆಯ ಮೇರೆಗೆ ಕೆಲಸ ನೀಡಲಾರಂಭಿಸಿದೆ.

‘100ಕ್ಕೂ ಅಧಿಕ ಪೈಲಟ್‌ಗಳು, 200ಕ್ಕೂ ಅಧಿಕ ಕ್ಯಾಬಿನ್‌ ಕ್ರ್ಯೂ ಹಾಗೂ 200ಕ್ಕೂ ಅಧಿಕ ತಾಂತ್ರಿಕ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಗೆ ಉದ್ಯೋಗ ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿನ ಸಿಬ್ಬಂದಿಗೆ ಉದ್ಯೋಗ ನೀಡಲಾಗುವುದು’ ಎಂದು ಸ್ಪೈಸ್‌ಜೆಟ್‌ ಸಂಸ್ಥೆಯ ಅಧ್ಯಕ್ಷ ಅಜಯ್ ಸಿಂಘ್‌ ತಿಳಿಸಿದ್ದಾರೆ.

ಜೆಟ್‌ ವಿಮಾನಗಳು ‘ಎಐ’ ಗುತ್ತಿಗೆಗೆ?
ಹಾರಾಟ ನಿಲ್ಲಿಸಿರುವ ಜೆಟ್‌ನ ಐದು ಬೋಯಿಂಗ್‌ 777ಎಸ್‌ ವಿಮಾನಗಳನ್ನು ಗುತ್ತಿಗೆಗೆ ಪಡೆಯಲು ಏರ್‌ ಇಂಡಿಯಾ (ಎಐ) ಸಜ್ಜಾಗಿದೆ ಎಂದು ಮೂಲಗಳು ಹೇಳಿವೆ.

ಈ ಕುರಿತು ಏರ್‌ ಇಂಡಿಯಾ ಅಧ್ಯಕ್ಷ ಅಶ್ವನಿ ಲೋಹಾನಿ ಮತ್ತು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಅವರು ಮಾತುಕತೆ ನಡೆಸಿದ್ದಾರೆ. ಇದೇ 27ರಂದು ನಡೆಯಲಿರುವ ಎಐ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. ಆ ಬಳಿಕ ಪ್ರಸ್ತಾವನೆಯನ್ನು ನಾಗರೀಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲು ಸಂಸ್ಥೆ ನಿರ್ಧರಿಸಿದೆ ಎಂದು ತಿಳಿಸಿವೆ.

ಪ್ರವಾಸೋದ್ಯಮಕ್ಕೆ ಪೆಟ್ಟು
ಜೆಟ್‌ ವಿಮಾನಗಳ ಹಾರಾಟ ರದ್ದಾಗಿರುವುದರಿಂದ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟುಬಿದ್ದಿದೆ ಎಂದು ಉದ್ಯಮವಲಯದ ತಜ್ಞರು ಹೇಳಿದ್ದಾರೆ.ವಿಮಾನ ಪ್ರಯಾಣ ದರದಲ್ಲಿ ಶೇ 25ರಷ್ಟು ಏರಿಕೆಯಾಗಿದೆ. ಭಾರಿ ಸಂಖ್ಯೆಯಲ್ಲಿ ಹೋಟೆಲ್‌ ಬುಕಿಂಗ್‌ ರದ್ದಾಗಿದೆ.

ಪ್ರಯಾಣ ದರದಲ್ಲಿ ಏರಿಕೆ
62%:
ಮುಂಬೈ–ಹೈದರಾಬಾದ್‌
52%:ಮುಂಬೈ–ದೆಹಲಿ
49%:ದೆಹಲಿ–ಮುಂಬೈ
10%:ಬೆಂಗಳೂರು–ದೆಹಲಿ
ಮಾಹಿತಿ: ಕ್ಲಿಯರ್‌ಟ್ರಿಪ್‌ ಡಾಟ್‌ಕಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.