JioFinance
ಮುಂಬೈ: ಯುಪಿಐ ಆಧರಿತ ಡಿಜಿಟಲ್ ಪಾವತಿ ವ್ಯವಸ್ಥೆ ಹಾಗೂ ಇತರೆ ಡಿಜಿಟಲ್ ಹಣಕಾಸು ಸೇವೆಗಳಿಗಾಗಿ ರಿಲಾಯನ್ಸ್ ಕಂಪನಿ ಒಡೆತನದ ಜಿಯೋ ಫಿನಾನ್ಸ್ (JioFinance) ಆ್ಯಪ್ ಸಿದ್ಧವಾಗುತ್ತಿದೆ.
ಗುರುವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ, JioFinance ಮೂಲಕ ಸಾಟಿಯಿಲ್ಲದ ಡಿಜಿಟಲ್ ಬ್ಯಾಂಕಿಂಗ್ ಅನುಭವಗಳನ್ನು ಗ್ರಾಹಕರಿಗೆ ನೀಡಲಿದ್ದೇವೆ ಎಂದು ಹೇಳಿದೆ.
ಈ ಆ್ಯಪ್‌ನ ಪೈಲಟ್ ಆವೃತ್ತಿ ಸಿದ್ದಗೊಂಡಿದ್ದು ಅದು ಯಶಸ್ವಿಯಾದ ಬಳಿಕ ಶೀಘ್ರದಲ್ಲೇ ಆಂಡ್ರಾಯ್ಡ್ ಹಾಗೂ ಐಒಎಸ್‌ನಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ತಿಳಿಸಿದೆ.
ಭಾರತದಲ್ಲಿ ಗೂಗಲ್ ಪೇ, ಫೋನ್ ಪೇ, ಅಮೆಜಾನ್‌ಗೆ ಸೆಡ್ಡು ಹೊಡೆಯಲು ರಿಲಾಯನ್ಸ್ ಮುಂದಾಗಿದೆ ಎನ್ನಲಾಗಿದೆ.
JioFinance ಆ್ಯಪ್ ಅನ್ನು ಅತ್ಯಂತ ನಾವೀನ್ಯತೆ ಹಾಗೂ ಗ್ರಾಹಕ ಸ್ನೇಹಿಯಾಗಿ ರೂಪಿಸಲಾಗುತ್ತಿದೆ. ಯುಪಿಐ, ಬಿಲ್ ಪಾವತಿ, ವಿಮಾ ಸೇವೆ, ಪೇಮೆಂಟ್ ಬ್ಯಾಂಕಿಂಗ್, ಸಾಲ ಸೌಲಭ್ಯದಂತಹ ಡಿಜಿಟಲ್ ಬ್ಯಾಂಕಿಂಗ್ ಅನುಭವಗಳನ್ನು ಒದಗಿಸಲಿದ್ದೇವೆ ಎಂದು ತಿಳಿಸಿದೆ.
ತಕ್ಷಣದ ಬ್ಯಾಂಕ್ ಅಕೌಂಟ್ ತೆರೆಯುವುದು ಸೇರಿದಂತೆ ಹಲವು ಸೌಲಭ್ಯಗಳು ಇರಲಿವೆ. ಗ್ರಾಹಕ ಬೇಕು ಬೇಡಗಳನ್ನು ತಕ್ಷಣವೇ ಬಗೆಹರಿಸಬಹುದಾದ ವ್ಯವಸ್ಥೆಯನ್ನು ತರಲಿದ್ದೇವೆ ಎಂದು ಕಂಪನಿ ತಿಳಿಸಿದೆ.
ಆದರೆ, ಈ ಆ್ಯಪ್ ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ಕಂಪನಿ ಅಧಿಕೃತವಾಗಿ ಪ್ರಕಟಿಸಿಲ್ಲ.
JioFinance ರಿಲಾಯನ್ಸ್‌ನವರ ‘ಜಿಯೋ ಫಿನಾನ್ಸಿಯಲ್ ಸರ್ವಿಸ್’ ಕಂಪನಿಯ ಒಂದು ಹೊಸ ಸೇವೆಯಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.