ADVERTISEMENT

ಕರ್ನಾಟಕದಲ್ಲಿ ನೆಟ್‍ವರ್ಕ್ ಸಾಮರ್ಥ್ಯ ಹೆಚ್ಚಿಸಿಕೊಂಡ ಜಿಯೋ

​ಪ್ರಜಾವಾಣಿ ವಾರ್ತೆ
Published 22 ಮೇ 2021, 16:09 IST
Last Updated 22 ಮೇ 2021, 16:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಾದ್ಯಂತ ಹೆಚ್ಚುವರಿ 15 ಮೆಗಾಹರ್ಟ್ಸ್‌ ತರಂಗಾಂತರಗಳನ್ನು ಖರೀದಿಸುವ ಮೂಲಕ ಜಿಯೋ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.

ಇತ್ತೀಚೆಗೆ ದೂರಸಂಪರ್ಕ ಇಲಾಖೆ ನಡೆಸಿದ ತರಂಗಾಂತರ (ಸ್ಪೆಕ್ಟ್ರಂ) ಹರಾಜಿನಲ್ಲಿ ದೇಶದಾದ್ಯಂತ ಎಲ್ಲಾ 22 ವಲಯಗಳಲ್ಲಿ ತರಂಗಾಂತರ ಬಳಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಆರ್‌ಜೆಐಎಲ್) ಮಾರ್ಚ್‌ನಲ್ಲಿ ಘೋಷಿಸಿತ್ತು.

ಕಂಪನಿಯು ಕ್ರಮವಾಗಿ 850MHZ, 1800MHZ ಮತ್ತು 2300MHZ ಬ್ಯಾಂಡ್‌ಗಳಲ್ಲಿ ತರಂಗಾಂತರಗಳನ್ನು ತನ್ನದಾಗಿಸಿಕೊಂಡಿದೆ. ಕರ್ನಾಟಕದಲ್ಲಿ ಜಿಯೋ 850MHz ಬ್ಯಾಂಡ್‌ನಲ್ಲಿ ಹೆಚ್ಚುವರಿ 5 MHz, 1800MHz ಬ್ಯಾಂಡ್‌ನಲ್ಲಿ ಹೆಚ್ಚುವರಿಯಾಗಿ 5MHz ಮತ್ತು 2300 MHz ಬ್ಯಾಂಡ್‌ನಲ್ಲಿ ಹೆಚ್ಚುವರಿಯಾಗಿ 10 MHz ಗಳನ್ನು ಪಡೆದುಕೊಂಡಿದೆ.

ADVERTISEMENT

ಈ ಮೂಲಕ ಜಿಯೋ ರಾಜ್ಯದಾದ್ಯಂತ ಶೇಕಡ 25ರಷ್ಟುತರಂಗಾಂತರಗಳನ್ನು ಹೆಚ್ಚಿಸಿಕೊಂಡಿದೆ. ತರಂಗಾಂತರಗಳು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುವುದರಿಂದ ರಾಜ್ಯದಲ್ಲಿನ ಚಂದಾದಾರರಿಗೆ ಉತ್ತಮ ನೆಟ್‌ವರ್ಕ್ ಸೌಲಭ್ಯ ದೊರೆಯಲಿದೆ ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಜಿಯೋ 2.1 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿದೆ. ಮತ್ತಷ್ಟು 4ಜಿ ಟವರ್‌ಗಳ ಬೇಡಿಕೆಯನ್ನು ಈಡೇರಿಸಲು 2021ರಲ್ಲಿ ತನ್ನ 4ಜಿ ನೆಟ್‌ವರ್ಕ್ ಅನ್ನು ಶೇ 28ರಷ್ಟು ವಿಸ್ತರಿಸಲಿದೆ. ಪ್ರಸ್ತುತ ಜಿಯೋ ರಾಜ್ಯದಲ್ಲಿ 22,300ಕ್ಕಿಂತ ಹೆಚ್ಚು 4ಜಿ ನೆಟ್‌ವರ್ಕ್ ಸ್ಥಳಗಳನ್ನು ಹೊಂದಿದ್ದು, ಇದು ಅತಿ ದೊಡ್ಡ 4ಜಿ ಹೆಜ್ಜೆಗುರುತಾಗಿದೆ. ಕಳೆದ ಒಂದು ವರ್ಷದಲ್ಲಿ ಜಿಯೋದ ಗ್ರಾಹಕ ಕ್ಷೇತ್ರ ದತ್ತಾಂಶ (ವಿಎಲ್‌ಆರ್) ಕೂಡ ಶೇ 9.2ರಷ್ಟು ಹೆಚ್ಚಳವಾಗಿದೆ ಎಂದು ಕಂಪನಿ ಹೇಳಿದೆ.

ರಿಲಯನ್ಸ್ ಜಿಯೋ, ಇತ್ತೀಚಿನ ತರಂಗಾಂತರ ಹರಾಜಿನಲ್ಲಿ 20 ವರ್ಷಗಳ ಅವಧಿಗೆ ₹57,123 ಕೋಟಿ ವೆಚ್ಚದಲ್ಲಿ 22 ವಲಯಗಳಿಗೆ ಒಟ್ಟು 488.35 MHZ (850 MHZ, 1800 MHZ ಮತ್ತು 2300 MHZ ಒಳಗೊಂಡಂತೆ) ತರಂಗಾಂತರಗಳನ್ನು ಖರೀದಿಸಿದೆ. ಇದರೊಂದಿಗೆ ಜಿಯೋ ತನ್ನ ಹೆಜ್ಜೆಗುರುತನ್ನು ಶೇ 55ರಷ್ಟು ಏರಿಕೆಯೊಂದಿಗೆ ಒಟ್ಟು 1717 MHZಗೆ ಹೆಚ್ಚಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.