
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ನೂತನ ಸರ್ಕಾರದ ಮೊದಲ ಬಜೆಟ್‌ನಲ್ಲಿ ಗ್ರಾಮೀಣ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ನಿರೀಕ್ಷೆ ಇದೆ ಎಂದು ಅಮೆರಿಕದ ಗೋಲ್ಡ್‌ಮನ್ ಸ್ಯಾಚ್ಸ್ ಸಂಸ್ಥೆಯು ಸೋಮವಾರ ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದ ಪೂರ್ಣ ಪ್ರಮಾಣದ ಬಜೆಟ್ ಅನ್ನು ಜುಲೈ 23ರಂದು ಮಂಡಿಸಲಾಗುವುದು ಎಂದು ಸರ್ಕಾರವು ಕಳೆದ ವಾರ ಹೇಳಿತ್ತು.
ಸರ್ಕಾರವು ಮಧ್ಯಂತರ ಬಜೆಟ್‌ನಲ್ಲಿ ನಿಗದಿಪಡಿಸಿದ ಜಿಡಿಪಿಯ ಶೇ 5.1ರಷ್ಟು, ವಿತ್ತೀಯ ಕೊರತೆ ಗುರಿಯ ಮಿತಿಯಲ್ಲಿ ಇರಲಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್‌ನ ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಾರೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ, ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ವಿಸ್ತರಿಸುವುದು; ಸೇವಾ ರಫ್ತಿನ ಮೇಲೆ ನಿರಂತರ ಗಮನ ಮತ್ತು ದೇಶೀಯ ಆಹಾರ ಪೂರೈಕೆ ಸರಪಳಿಗೆ ಒತ್ತು ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞ ಶಾಂತನು ಸೇನ್‌ಗುಪ್ತ ಹೇಳಿದ್ದಾರೆ.
ಈ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಬಹುಮತ ಗಳಿಸುವಲ್ಲಿ ವಿಫಲವಾಯಿತು. ಮಿತ್ರಪಕ್ಷಗಳ ಸಹಾಯದಿಂದ ಮತ್ತೆ ಅಧಿಕಾರಕ್ಕೆ ಏರಿದೆ. ನಿರುದ್ಯೋಗ ಮತ್ತು ಹಣದುಬ್ಬರವು ಮತದಾರರಿಗೆ ಪ್ರಮುಖ ವಿಷಯವಾದವು ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.
ಭಾರತದ ಆರ್ಥಿಕತೆಯು ಈ ವರ್ಷ ಶೇ 7.2ರಷ್ಟು ವೇಗವಾಗಿ ಬೆಳೆಯುತ್ತಿರುವುದನ್ನು ನೋಡಿದರೆ, ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿಯಬೇಕಾಗುತ್ತದೆ. ಶೇ 7ರ ಜಿಡಿಪಿ ಬೆಳವಣಿಗೆ ಮುಂದಿನ ದಶಕದಲ್ಲಿ ಉದ್ಯೋಗ ಅಗತ್ಯವನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ಸಿಟಿ ಸಮೂಹದ ಮುಖ್ಯ ಅರ್ಥಶಾಸ್ತ್ರಜ್ಞ ಸಮೀರನ್ ಚಕ್ರವರ್ತಿ ಕಳೆದ ವಾರ ಹೇಳಿದ್ದರು. ಆರ್ಥಿಕತೆಯ ವೇಗವು ಪ್ರತಿ ವರ್ಷ 80–90 ಲಕ್ಷ ಉದ್ಯೋಗ ಸೃಷ್ಟಿಸುತ್ತದೆ. ಆದರೆ, ವಾರ್ಷಿಕ 1.1 ಕೋಟಿಯಿಂದ 1.2 ಕೋಟಿ ಉದ್ಯೋಗ ಒದಗಿಸಬೇಕಾಗಿದೆ ಎಂದು ಹೇಳಿದ್ದಾರೆ.
ವಾಣಿಜ್ಯ ವಿಮಾನ ತಯಾರಿಕೆಯ ಜೊತೆಗೆ ಆಟಿಕೆಗಳು, ಜವಳಿ ಮತ್ತು ಉಡುಪು ತಯಾರಿಕೆಯಂತಹ ವಲಯಗಳಿಗೆ ಬಜೆಟ್‌ನಲ್ಲಿ ಹಣಕಾಸಿನ ಪ್ರೋತ್ಸಾಹ ನೀಡಿದರೆ, ಕಾರ್ಮಿಕರ ಸಂಖ್ಯೆ ಹೆಚ್ಚಳವಾಗಲಿದೆ ಎಂಬ ನಿರೀಕ್ಷೆ ಇದೆ ಎಂದೂ ಮತಗಟ್ಟೆ ಸಮೀಕ್ಷೆಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು.
ದೇಶೀಯ ಮೌಲ್ಯ ಸೇರ್ಪಡೆ ಹೆಚ್ಚು ಮಾಡವುದು ಮತ್ತು ಸ್ಪಷ್ಟ ಉದ್ಯೋಗ ಗುರಿಯತ್ತ ಗಮನ ಕೇಂದ್ರೀಕರಿಸುವ ಮೂಲಕ ಉತ್ಪಾದನಾ ಸಂಬಂಧಿತ ಪ್ರೋತ್ಸಾಹ ಯೋಜನೆ ವಿಸ್ತರಿಸುವ ಕುರಿತು ಸರ್ಕಾರವು ಆಲೋಚಿಸಬಹುದು ಎಂದು ‘ಸಿಟಿ’ ತನ್ನ ವರದಿಯಲ್ಲಿ ಹೇಳಿದೆ.
ಪ್ರಮುಖ ಬೆಳೆಗಳ ದೇಶೀಯ ಉತ್ಪಾದನೆ ಹೆಚ್ಚಿಸಲು ಕೃಷಿ ಮೂಲಸೌಕರ್ಯ ಮತ್ತು ಪ್ರೋತ್ಸಾಹದ ಮೇಲೆ ಗಮನ ಕೇಂದ್ರೀಕರಿಸುವುದನ್ನು ‘ಗೋಲ್ಡ್‌ಮನ್’ ನಿರೀಕ್ಷಿಸುತ್ತಿದೆ.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.