ADVERTISEMENT

ಬಿಪಿಎಸ್‌ಎಲ್‌ ಪುನರುಜ್ಜೀವನ ಯೋಜನೆಗೆ ಅಸ್ತು: ಎಂಟು ವರ್ಷಗಳ ಕಾನೂನು ಸಮರ ಅಂತ್ಯ

ಪಿಟಿಐ
Published 27 ಸೆಪ್ಟೆಂಬರ್ 2025, 14:12 IST
Last Updated 27 ಸೆಪ್ಟೆಂಬರ್ 2025, 14:12 IST
   

ನವದೆಹಲಿ: ಸಾಲದ ಸುಳಿಯಲ್ಲಿದ್ದ ಭೂಷಣ್ ಪವರ್ ಆ್ಯಂಡ್‌ ಸ್ಟೀಲ್‌ ಲಿಮಿಟೆಡ್‌ (ಬಿಪಿಎಸ್‌ಎಲ್‌) ಕಂಪನಿಯ ಪುನರುಜ್ಜೀವನಕ್ಕೆ ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಯು ಸಲ್ಲಿಸಿದ್ದ ₹19,700 ಕೋಟಿಯ ಯೋಜನೆಯನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಈ ಮೂಲಕ ಸರಿಸುಮಾರು ಎಂಟು ವರ್ಷಗಳ ಕಾನೂನು ಸಮರವೊಂದು ಕೊನೆಗೊಂಡಂತೆ ಆಗಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಸತೀಶ್‌ ಚಂದ್ರ ಶರ್ಮ ಹಾಗೂ ಕೆ. ವಿನೋದ್ ಚಂದ್ರನ್ ಅವರು ಇದ್ದ ತ್ರಿಸದಸ್ಯ ಪೀಠವು, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ) 2020ರ ಫೆಬ್ರುವರಿ 17ರಂದು ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.

₹19,700 ಕೋಟಿಗೆ ಬಿಪಿಎಸ್‌ಎಲ್‌ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಜೆಎಸ್‌ಡಬ್ಲ್ಯು ಸ್ಟೀಲ್ ಕಂಪನಿಗೆ ಎನ್‌ಸಿಎಲ್‌ಎಟಿ ಅಸ್ತು ಎಂದಿತ್ತು.

ADVERTISEMENT

ಇದಕ್ಕೂ ಮೊದಲು ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವೊಂದು, ಬಿಪಿಎಸ್‌ಎಲ್‌ ಕಂಪನಿಯ ಪುನರುಜ್ಜೀವನಕ್ಕೆ ಜೆಎಸ್‌ಡಬ್ಲ್ಯು ಸ್ಟೀಲ್‌ ಸಲ್ಲಿಸಿದ್ದ ಯೋಜನೆಯನ್ನು ತಿರಸ್ಕರಿಸಿತ್ತು. ಈ ಯೋಜನೆಯು ಕಾನೂನುಬಾಹಿರ ಹಾಗೂ ದಿವಾಳಿ ಸಂಹಿತೆಯ (ಐಬಿಸಿ) ಉಲ್ಲಂಘನೆ ಎಂದು ಕೂಡ ಹೇಳಿತ್ತು.

ಬಿಪಿಎಸ್‌ಎಲ್‌ ಕಂಪನಿಯ ಪುನರುಜ್ಜೀವನಕ್ಕೆ ನಡೆಸಿದ ಪ್ರಕ್ರಿಯೆಯಲ್ಲಿ ಎಲ್ಲ ಪ್ರಮುಖ ಪಾಲುದಾರರ ನಡೆಯ ಬಗ್ಗೆ ದ್ವಿಸದಸ್ಯ ಪೀಠವು ಆಕ್ಷೇಪ ದಾಖಲಿಸಿತ್ತು. ದ್ವಿಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಲು, ಅವುಗಳ ವಿಚಾರಣೆ ನಡೆಸಲು ಸಿಜೆಐ ನೇತೃತ್ವದ ಪೀಠವು ಒಪ್ಪಿತ್ತು.

ಜೆಎಸ್‌ಡಬ್ಲ್ಯು ಸ್ಟೀಲ್‌ ಸಲ್ಲಿಸಿದ್ದ ಯೋಜನೆಯನ್ನು ತಿರಸ್ಕರಿಸಿ, ಬಿಪಿಎಸ್‌ಎಲ್‌ ಕಂಪನಿಯ ಪರಿಸಮಾಪ್ತಿಗೆ ದ್ವಿಸದಸ್ಯ ಪೀಠವು ಮೇ 2ರಂದು ಸೂಚಿಸಿತ್ತು. ಈ ಸೂಚನೆಯನ್ನು ಸಿಜೆಐ ನೇತೃತ್ವದ ಪೀಠವು ಜುಲೈ 31ರಂದು ಹಿಂಪಡೆದಿತ್ತು. 

‘ದೀರ್ಘಕಾಲದ ವಿಳಂಬದ ನಂತರದಲ್ಲಿ ಪುನರುಜ್ಜೀವನ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಯಿತು. ಗಣನೀಯ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿದ್ದ ಸಾಲಗಾರ ಸಂಸ್ಥೆಯು (ಬಿಪಿಎಸ್‌ಎಲ್‌) ಈಗ ಲಾಭ ಗಳಿಸುತ್ತಿದೆ’ ಎಂದು ಸಿಜೆಐ ಪೀಠದ ತೀರ್ಪಿನಲ್ಲಿ ಹೇಳಲಾಗಿದೆ. ಜೆಎಸ್‌ಡಬ್ಲ್ಯು ಸ್ಟೀಲ್ ಕಂಪನಿಯು ಬಿಪಿಎಸ್‌ಎಲ್‌ಗಾಗಿ ದೊಡ್ಡ ಮೊತ್ತದ ಹೂಡಿಕೆ ಮಾಡಿದೆ ಎಂದು ಉಲ್ಲೇಖಿಸಲಾಗಿದೆ.

‘ಇಷ್ಟೇ ಅಲ್ಲ, ಜೆಎಸ್‌ಡಬ್ಲ್ಯು ಸಿದ್ಧಪಡಿಸಿದ ಯೋಜನೆಯ ಅನುಷ್ಠಾನದಿಂದಾಗಿ ಬಿಪಿಎಸ್‌ಎಲ್‌ ಕಂಪನಿಯು ಲಾಭ ಗಳಿಸಿ, ಸಹಸ್ರಾರು ನೌಕರರು ಜೀವನೋಪಾಯ ಕಂಡುಕೊಂಡಿದ್ದಾರೆ. ಹೀಗಾಗಿ, ದಿವಾಳಿ ಸಂಹಿತೆಯನ್ನು ರೂಪಿಸಿದ ಉದ್ದೇಶ ಈಡೇರಿರುವುದು ಮಾತ್ರವಲ್ಲದೆ, ಬಿಪಿಎಸ್‌ಎಲ್‌ ಕಂಪನಿಯಲ್ಲಿಯೂ ಪರಿವರ್ತನೆ ಆಗಿದೆ’ ಎಂದು ತೀರ್ಪು ಹೇಳಿದೆ.

ಬಿಪಿಎಸ್‌ಎಲ್‌ ಕಂಪನಿಯು ಅತಿಹೆಚ್ಚಿನ ಮೊತ್ತದ ಸಾಲವನ್ನು ಉಳಿಸಿಕೊಂಡ 12 ಕಾರ್ಪೊರೇಟ್ ಕಂಪನಿಗಳ ಪೈಕಿ ಒಂದಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.