ADVERTISEMENT

ಇ– ಕಾಮರ್ಸ್‌ ಉತ್ತೇಜನ: ಅಮೆಜಾನ್‌ ಜತೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 20:18 IST
Last Updated 28 ಜನವರಿ 2021, 20:18 IST
ಅಮೆಜಾನ್‌
ಅಮೆಜಾನ್‌    

ಬೆಂಗಳೂರು: ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಉತ್ಪನ್ನಗಳನ್ನು ಇ– ಕಾಮರ್ಸ್‌ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವುದಕ್ಕೆ ಉತ್ತೇಜಿಸುವ ಸಲುವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಇ– ಕಾಮರ್ಸ್‌ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಅಮೆಜಾನ್‌ ಜತೆ ಗುರುವಾರ ಒಪ್ಪಂದ ಮಾಡಿಕೊಂಡಿದೆ.

ಕರ್ನಾಟಕ ಉದ್ಯೋಗ ಮಿತ್ರದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಬಳಿಕ ಮಾತನಾಡಿದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ‘ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ವಿಸ್ತರಿಸಲು ಈ ಒಪ್ಪಂದ ಪೂರಕವಾಗಲಿದೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಟ್ಟದ ಮಾರುಕಟ್ಟೆಯೂ ಲಭ್ಯವಾಗಲಿದೆ’ ಎಂದರು.

ಕೃಷಿ ಸಂಬಂಧಿ ಉತ್ಪನ್ನಗಳು, ಆಟೊಮೊಬೈಲ್‌, ಜವಳಿ, ಜೈವಿಕ ತಂತ್ರಜ್ಞಾನ, ಆಟಿಕೆಗಳು, ಏರೋಸ್ಪೇಸ್‌ ಸೇರಿದಂತೆ ಹಲವು ಕ್ಷೇತ್ರಗಳ ಉದ್ದಿಮೆಗಳು ತಮ್ಮ ಉತ್ಪನ್ನಗಳನ್ನು ಇ–ಕಾಮರ್ಸ್‌ ಮೂಲಕ ರಫ್ತು ಮಾಡಲು ನೆರವು ನೀಡಲಾಗುವುದು. ಬಳ್ಳಾರಿ, ಮೈಸೂರು, ಚನ್ನಪಟ್ಟಣ ಸೇರಿದಂತೆ ರಾಜ್ಯದ ಪ್ರಮುಖ ಎಂಎಸ್‌ಎಂಇ ಕ್ಲಸ್ಟರ್‌ಗಳಲ್ಲಿ ಅಮೆಜಾನ್‌ ಸಹಯೋಗದಲ್ಲಿ ಉದ್ಯಮಿಗಳಿಗೆ ತರಬೇತಿ ನೀಡಲಾಗುವುದು. ‘ಅಮೆಜಾನ್‌ ಗ್ಲೋಬಲ್‌ ಸೆಲ್ಲಿಂಗ್‌’ ಮೂಲಕ ಉದ್ಯಮಿಗಳಿಗೆ ನೆರವಾಗಲಿದೆ ಎಂದು ತಿಳಿಸಿದರು.

ADVERTISEMENT

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಆಯುಕ್ತೆ ಗುಂಜನ್‌ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ, ವಿಶ್ವೇಶ್ವರಯ್ಯ ವಹಿವಾಟು ಉತ್ತೇಜನ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.